ಶ್ರೀನಗರ : ಜಮ್ಮು ರಾಷ್ಟ್ರೀಯ ಹೆದ್ದಾರಿ ಬಂದ್ ಹಿನ್ನೆಲೆ ಸೇಬು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, 40% ರಷ್ಟು ಬೆಲೆ ಕುಸಿತಗೊಂಡಿದೆ. ಇದರಿಂದಾಗಿ ಸೇಬು ಬೆಳೆಗಾರರಿಗೆ ತೀವ್ರ ತೊಂದರೆಯಾಗಿದೆ.
ಮಳೆ, ಪ್ರವಾಹದಿಂದಾಗಿ ಆಗಸ್ಟ್ ಅಂತ್ಯದಿಂದ ಸೆಪ್ಟೆಂಬರ್ ಮಧ್ಯದವರೆಗೆ ಮೂರು ವಾರಗಳ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿತ್ತು. ಪರಿಣಾಮ ಟ್ರಕ್ಗಳಲ್ಲಿ ತುಂಬಿದ್ದ ಸೇಬು ಹಣ್ಣುಗಳು ಕೊಳೆತುಹೋಗಿವೆ. ಇದರ ನಡುವೆ ಕೇಂದ್ರ ಸರ್ಕಾರವು ಕಣಿವೆ ರಾಜ್ಯದ ಆರ್ಥಿಕತೆಯನ್ನು ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಕಾಶ್ಮೀರದಲ್ಲಿ ವಾರ್ಷಿಕ 20 ಲಕ್ಷ ಮೆಟ್ರಿಕ್ಟನ್ಗಳಿಗಿಂತ ಹೆಚ್ಚು ಸೇಬು ಬೆಳೆಯುತ್ತಾರೆ. ಕಾಶ್ಮೀರದಿಂದ ದೆಹಲಿ, ಮುಂಬೈ, ಬೆಂಗಳೂರು, ಅಹಮದಾಬಾದ್ ಸೇರದಂತೆ ಹಲವು ರಾಜ್ಯಗಳಿಗೆ ಸೇಬು ರಫ್ತಾಗುತ್ತದೆ.