ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ದೂರುದಾರ ಹಾಗೂ ಸಾಮಾಜಿಕ ಹೋರಾಟಗಾರ ಜಯಂತ್ ಅವರು ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ದೂರುದಾರರೂ ಆಗಿರುವ ಸಾಕ್ಷಿ ಚಿನ್ನಯ್ಯ ಅವರನ್ನು ದೂರು ಸಲ್ಲಿಸುವ ಮೊದಲು ದೆಹಲಿಗೆ ಕರೆದೊಯ್ಯಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಜಯಂತ್ ಅವರ ಪ್ರಕಾರ, ಬುರುಡೆಯನ್ನು ಮೊದಲಿಗೆ ಸುಪ್ರೀಂ ಕೋರ್ಟ್‌ಗೆ ತೆಗೆದುಕೊಂಡು ಹೋಗಲು ಯೋಜನೆ ರೂಪಿಸಲಾಗಿತ್ತು. ಈ ಕಾರಣಕ್ಕಾಗಿ ಗಿರೀಶ್ ಮಟ್ಟಣ್ಣನವರು, ಚಿನ್ನಯ್ಯ, ಸುಜಾತಾ ಭಟ್ ಮತ್ತು ಜಯಂತ್ ಸೇರಿ ನಾಲ್ವರು ಕಾರಿನಲ್ಲಿ ದೆಹಲಿಗೆ ತೆರಳಿದ್ದರು. ಆದರೆ, ಅಲ್ಲಿ ಯೋಜನೆ ಯಶಸ್ವಿಯಾಗದ ಕಾರಣ ಬುರುಡೆಯನ್ನು ವಾಪಸ್ ತರಲಾಯಿತು ಎಂದು ಜಯಂತ್ ವಿವರಿಸಿದ್ದಾರೆ.
ಬೆಂಗಳೂರಿನ ತಮ್ಮ ಮನೆಯಲ್ಲಿ ಚಿನ್ನಯ್ಯ ಮೂರು ದಿನ ಇದ್ದರು ಎಂದು ಜಯಂತ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ, ಎಸ್‌ಐಟಿ ಅಧಿಕಾರಿಗಳು ಜಯಂತ್ ಅವರ ಬೆಂಗಳೂರಿನ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಜಯಂತ್ ಮನೆ ಸಮೀಪದ ನಿವಾಸಿ ಮಹಾಲಕ್ಷ್ಮೀ ಎಂಬವರು ಮಾಧ್ಯಮಗಳಿಗೆ ಚಿನ್ನಯ್ಯನ ಬಗ್ಗೆ ಹೇಳಿಕೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಟಿವಿಯಲ್ಲಿ ಚಿನ್ನಯ್ಯನನ್ನು ನೋಡಿದಾಗ ಈತನೇ ಜಯಂತ್ ಮನೆಗೆ ಬಂದು ಹೋಗುತ್ತಿದ್ದ ಬಗ್ಗೆ ಗೊತ್ತಾಯಿತು. ಚಿನ್ನಯ್ಯ ಜಯಂತ್ ಮನೆಯಲ್ಲಿ ಇದ್ದದ್ದು ನಿಜ. ನಾನು ಕೂಡ ನೋಡಿದ್ದೇನೆ. ನಾನು ಕೂಡ ಅದೇ ಕಟ್ಟಡದಲ್ಲಿ ಬಾಡಿಗೆಗೆ ಇದ್ದೆ. ಈ ವೇಳೆ ಜಯಂತ್ ಮನೆಗೆ ಸುಮಾರು ಜನ ಬಂದು ಹೋಗುತ್ತಿದ್ದರು. ಕಳೆದ ಒಂದೂವರೆ ವರ್ಷದಿಂದ ಕೂಡ ಚಿನ್ನಯ್ಯ ಆಗಾಗ್ಗೆ ಇಲ್ಲಿ ಬಂದು ಹೋಗಿದ್ದರು ಎಂದು ಹೇಳಿದರು.
ಜಯಂತ ತಪ್ಪೊಪ್ಪಿಗೆ
ಬುರುಡೆ ಚಿನ್ನಯ್ಯನ ಜೊತೆ ದಿಲ್ಲಿಗೆ ಹೋಗಿದ್ದೇನೆ. ಬುರುಡೆಯನ್ನು ಹಿಡಿದು ತಿರುಗಾಡಿದ್ದು ನನ್ನ ತಪ್ಪು, ಆ ತಪ್ಪಿಗೆ ಶಿಕ್ಷೆ ಎದುರಿಸೋಕೆ ನಾನು ಸಿದ್ಧನಾಗಿದ್ದೇನೆ ಎಂದು ದೂರುದಾರ ಜಯಂತ್ ಟಿ. ತಿಳಿಸಿದ್ದಾರೆ. ‘ನಾಲ್ಕು ತಿಂಗಳ ಹಿಂದೆ ಚಿನ್ನಯ್ಯನನ್ನು ವಕೀಲರು ನನ್ನ ಮನೆಗೆ ಕರೆತಂದಿದ್ದರು. ಬಳಿಕ ಸುಜಾತಾ ಭಟ್, ಗಿರೀಶ್ ಮಟ್ಟಣ್ಣನವರ್, ಚಿನ್ನಯ್ಯ ಮತ್ತು ನಾನು ಬುರುಡೆ ಸಮೇತ ದೆಹಲಿಗೆ ಹೋಗಿ ಸುಪ್ರೀಂಕೋರ್ಟ್ ವಕೀಲರನ್ನು ಭೇಟಿಯಾಗಿದ್ದೆವು.
ಆದರೆ ಅಲ್ಲಿ ನಮ್ಮ ಯೋಜನೆ ಸಫಲವಾಗದ ಕಾರಣ ಬುರುಡೆಯನ್ನು ವಾಪಸ್ ತರಲಾ ಯಿತು’ ಎಂದು ಎಸ್‌ಐಟಿ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಚಿನ್ನಯ್ಯ ಈಗ ಬೇರೆ ಬೇರೆ ಹೇಳಿಕೆ ನೀಡುತ್ತಿ ದ್ದಾನೆ. ಪ್ರಕರಣ ಇಷ್ಟು ದೊಡ್ಡದಾ ಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ, ನಾನು ಬಲಿಪಶು ಆಗಿಲ್ಲ. ಆದರೆ ಮಾಡಿದ್ದು ತಪ್ಪು ಅಂತಾ ಅನಿಸುತ್ತಿದೆ ಎಂದು ಟಿ ಜಯಂತ್ ಹೇಳಿದ್ದಾರೆ.