ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್(82) ಅವರು ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.
ಜೋ ಬೈಡನ್ ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಅವರ ಮೂಳೆಗಳಿಗೆ ಕ್ಯಾನ್ಸರ್ ಹರಡಿದೆ ಎಂದು ಜೋ ಬೈಡನ್ ಅವರ ಕಚೇರಿ ಭಾನುವಾರ ಅಧಿಕೃತವಾಗಿ ತಿಳಿಸಿದೆ.
ಸಾಮಾನ್ಯ ತಪಾಸಣೆಯಲ್ಲಿ ಜೋ ಬೈಡನ್ ಅವರ ಪ್ರಾಸ್ಟೇಟ್ ಗ್ರಂಥಿಯಲ್ಲಿ ಒಂದು ಸಣ್ಣ ಗಂಟು ಕಂಡುಬಂದಿದೆ. ನಂತರ ಪರೀಕ್ಷೆ ಮಾಡಿದಾಗ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಕ್ಯಾನ್ಸರ್ ಕೋಶಗಳು ಮೂಳೆಗಳಿಗೂ ಹರಡಿವೆ. ಆದರೆ ಇದು ಹಾರ್ಮೋನ್‌ಗಳಿಗೆ ಸ್ಪಂದಿಸುವ ಕ್ಯಾನ್ಸರ್ ಆಗಿರುವುದರಿಂದ ಚಿಕಿತ್ಸೆ ನೀಡಲು ಸಾಧ್ಯವಿದೆ ಎಂದು ಅವರ ಕಚೇರಿ ಮಾಹಿತಿ ನೀಡಿದೆ.
ಮೂತ್ರ ವಿಸರ್ಜನೆಯಲ್ಲಿ ಸಮಸ್ಯೆ ಎದುರಾಗಿತ್ತು. ಹಾಗಾಗಿ ಶುಕ್ರವಾರ ವೈದ್ಯರನ್ನು ಭೇಟಿಯಾಗಿದ್ದರು. ವೈದ್ಯರು ವೈದ್ಯಕೀಯ ತಪಾಸಣೆ ಮಾಡಿದ ಬಳಿಕ ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಕ್ಯಾನ್ಸರ್ ಕೋಶಗಳು ಮೂಳೆಗಳಿಗೂ ಹರಡಿವೆ. ಅವರ ಗ್ಲೀಸನ್ ಸ್ಕೋರ್ 9 ಆಗಿದ್ದು, ಇದು ತೀವ್ರ ಮಟ್ಟದ ಕ್ಯಾನ್ಸರ್ ಎಂದು ಪತ್ತೆಯಾಗಿದೆ. ಚಿಕಿತ್ಸೆ ನೀಡಲು ಸಾಧ್ಯವಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಬೈಡನ್ ಮತ್ತು ಅವರ ಕುಟುಂಬ ವೈದ್ಯರೊಂದಿಗೆ ಚಿಕಿತ್ಸೆಯ ಬಗ್ಗೆ ಚರ್ಚಿಸುತ್ತಿದ್ದಾರೆ. ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಗ್ಲೀಸನ್ ಸ್ಕೋರ್ 1 ರಿಂದ 10 ರವರೆಗೆ ನೀಡಲಾಗುತ್ತದೆ. ಬೈಡನ್ ಅವರ ಸ್ಕೋರ್ 9 ಆಗಿದ್ದು, ಇದು ತೀವ್ರ ಮಟ್ಟದ ಕ್ಯಾನ್ಸರ್ ಎಂದು ತಿಳಿದುಬಂದಿದೆ.
ಜೋ ಬೈಡನ್ ಅವರ ಗಂಭೀರ ಆರೋಗ್ಯ ಸ್ಥಿತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದುಃಖ ವ್ಯಕ್ತಪಡಿಸಿದ್ದು, “ಜೋ ಬೈಡನ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಬೈಡನ್‌ಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾದ ಸುದ್ದಿ ಕೇಳಿ ಮೆಲಾನಿಯಾ ಮತ್ತು ನನಗೆ ಇಬ್ಬರಿಗೂ ದುಃಖವಾಗಿದೆ. ಬೈಡನ್ ಬೇಗ ಗುಣಮುಖರಾಗಲಿ ಎಂದು ಆಶಿಸುತ್ತೇವೆ” ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
“ಜೋ ಬೈಡನ್ ಒಬ್ಬ ಯೋಧ, ಅವರ ಜೀವನ ಹಾಗೂ ನಾಯಕತ್ವವನ್ನು ನೋಡಿ ಕಲಿಯುವುದು ಸಾಕಷ್ಟಿದೆ. ಅವರು ಬೇಗ ಚೇತರಿಸಿಕೊಳ್ಳಲಿ” ಎಂದು ಕಮಲಾ ಹ್ಯಾರಿಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.