ಬೆಂಗಳೂರು: ಕಳೆದ 29 ದಿನಗಳಲ್ಲಿ 7,500 ಮೆಮೊಗಳಲ್ಲಿ 5,500 ಮೆಮೊಗಳನ್ನು ವಿಚಾರಣೆಗೆ ಪಟ್ಟಿ ಮಾಡಿದ್ದೇನೆ. ಇನ್ನೂ ಎಷ್ಟು ಮೆಮೊಗಳನ್ನು ಸ್ವೀಕರಿಸಲಿ..?
ನಾನು ಕೂಡ ಮನುಷ್ಯ. ಹಸುವಿನ ಕೆಚ್ಚಲಲ್ಲಿ ರಕ್ತ ಬರುವವರೆಗೂ ಹಾಲು ಕರೆಯಲಾಗದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅಸಮಾಧಾನಿತರಾಗಿದ್ದಾರೆ.
ಮಂಗಳವಾರ ನ್ಯಾಯಪೀಠದ ಮುಂದೆ ಹಾಜರಾದ ವಕೀಲರೊಬ್ಬರು, ತಮ್ಮ ಪ್ರಕರಣದ ಇತ್ಯರ್ಥಕ್ಕೆ ಸಂಬಂಧಿಸಿದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಕೋರಿ ಮೆಮೊ ಸಲ್ಲಿಸಿದರು.
ಮುಂದುವರಿದು, ನಾನು ಹಲವು ಬಾರಿ ಮೆಮೊ ಸಲ್ಲಿಸಿದ್ದೇನೆ. ಇನ್ನೂ ವಿಚಾರಣೆಗೆ ನಿಗದಿಯಾಗಿಲ್ಲ. ಈ ಬಾರಿ ಪರಿಗಣಿಸಬೇಕು ಎಂದು ಮನವಿ ಮಾಡಿ ಮೆಮೊ ನೀಡಲು ಮುಂದಾದರು. ಸಾಮಾನ್ಯ ಪ್ರಕರಣಗಳನ್ನು ವಿಚಾರಣೆ ನಡೆಸುವ ಪೀಠದ ಹೊಣೆಯನ್ನು ನ್ಯಾ. ಎಂ ನಾಗಪ್ರಸನ್ನ ಅವರು ಹೊತ್ತಿರುವುದರಿಂದ ತುರ್ತು ಪರಿಹಾರದ ಅರ್ಜಿಗಳು ಅವರ ಮುಂದೆ ಯಥೇಚ್ಛವಾಗಿ ಸಲ್ಲಿಕೆಯಾಗುತ್ತವೆ.
ಇದರೊಂದಿಗೆ ಪೂರ್ವನಿಗದಿಯಾಗಿರುವ ಪ್ರಕರಣಗಳನ್ನು ನ್ಯಾಯಮೂರ್ತಿಗಳು ನಡೆಸಬೇಕು. ಅಲ್ಲದೇ, ಪ್ರತಿದಿನ ತೀರ ಅತ್ಯಗತ್ಯ ಪರಿಹಾರದ ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಕೋರಿ ವಕೀಲರು ಮೆಮೊ ಸಲ್ಲಿಕೆ ಮಾಡುತ್ತಾರೆ. ಪ್ರತಿದಿನ ಮೆಮೊ ಸ್ವೀಕರಿಸುವುದಕ್ಕೆ ನ್ಯಾ. ನಾಗಪ್ರಸನ್ನ ಅವರು ಕಲಾಪ ಆರಂಭದ ಅರ್ಧ ತಾಸನ್ನು ಅದಕ್ಕೆ ವಿನಿಯೋಗಿಸುವಂತಾಗಿದೆ. ಇದೆಲ್ಲದರ ನಡುವೆಯೂ ಪ್ರಕರಣಗಳ ವಿಲೇವಾರಿ ವಿಚಾರದಲ್ಲಿಯೂ ಅಸಾಧಾರಣ ವೇಗವನ್ನು ಅವರು ಕಾಯ್ದುಕೊಂಡಿದ್ದಾರೆ