ನವದೆಹಲಿ: ಪಾಕಿಸ್ತಾನದ ಪರವಾಗಿ ಗೂಢಾಚಾರಿಕೆ ಮಾಡಿರುವ ಆರೋಪದ ಮೇಲೆ ಬಂಧನವಾಗಿರುವ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸಂಚು ಒಂದೊಂದೇ ಬಯಲಾಗುತ್ತಿದೆ. ಅಧಿಕಾರಿಗಳು ಆಕೆಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಒಟ್ಟು ನಾಲ್ಕು ಪಾಕಿಸ್ತಾನ ಏಜೆಂಟ್‌ಗಳ ಜೊತೆ ಸಂಪರ್ಕದಲ್ಲಿದ್ದಳು ಎಂಬ ಸಂಗತಿ ತಿಳಿದು ಬಂದಿದೆ. ಸದ್ಯ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ಜ್ಯೋತಿಗೆ ಸಂಬಂಧಪಪಟ್ಟ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ.
ಜ್ಯೋತಿ ಬಳಸುತ್ತಿದ್ದ ಲ್ಯಾಪ್‌ಟಾಪ್‌ನ್ನು ವಶಪಡಿಸಿಕೊಂಡಿದ್ದು, ಆಕೆ ಕನಿಷ್ಠ ನಾಲ್ವರು ಪಾಕಿಸ್ತಾನಿಯರೊಂದಿಗೆ ಸಂಪರ್ಕದಲ್ಲಿದ್ದಳು ಎಂದು ವಿಧಿವಿಜ್ಞಾನ ವರದಿಯ ಪ್ರಕಾರ ಬೆಳಕಿಗೆ ಬಂದಿದೆ. ಮುಂದುವರೆದು ಆಕೆಯ, ಫೋನ್ ಮತ್ತು ಲ್ಯಾಪ್‌ಟಾಪ್‌ಗಳಿಂದ ಸುಮಾರು 12 ಟೆರಾಬೈಟ್‌ಗಳ (ಟಿಬಿ) ಡೇಟಾವನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ವೀಡಿಯೊ, ಫೋಟೋ, ಆಕೆಯ ನಾರ್ಮಲ್ ಮೆಸೇಜ್ ಹಾಗೂ ವಾಟ್ಸಾಪ್ ಚಾಟ್ ದಾಖಲೆಗಳು ಜೊತೆಗೆ ಹಣದ ವಹಿವಾಟು ವಿವರಗಳೊಂದಿಗೆ ಹಲವಾರು ಸೂಕ್ಷ್ಮ ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ.
ಹರಿಯಾಣದ ಹಿಸ್ಸಾರ್ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳೊಂದಿಗೆ ಸ್ನೇಹ ಬೆಳೆಸಿ, ಭಾರತೀಯ ಸೇನೆಯ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ ರಹಸ್ಯವಾಗಿ ರವಾನಿಸಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾಳೆ. ಆಕೆ ‘ಟ್ರಾವೆಲ್ ವಿತ್ ಜೋ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾಳೆ ಮತ್ತು 3.77 ಲಕ್ಷ ವೀಕ್ಷಕರನ್ನು ಹೊಂದಿದ್ದಾಳೆ. ದೆಹಲಿಯಲ್ಲಿರುವ ಪಾಕಿಸ್ತಾನಿ ಹೈ ಕಮೀಷನರ್ ಡ್ಯಾನಿಷ್ ಜೊತೆ ಜ್ಯೋತಿ ಸಂಪರ್ಕದಲ್ಲಿದ್ದಳು. ಆತನ ಜೊತೆಗೆ ಜ್ಯೋತಿಯ ಹಲವು ವಿಡಿಯೋಗಳು ಕಾಣಿಸಿಕೊಂಡಿದ್ದವು. ಮತ್ತೊಂದು ವಿಡಿಯೋ ಬಹಿರಂಗವಾಗಿದೆ. ಆ ವಿಡಿಯೋದಲ್ಲಿ, ಜ್ಯೋತಿ ಲಾಹೋರ್‌ನ (Lahore) ಅನಾರ್ಕಲಿ ಮಾರುಕಟ್ಟೆಯಲ್ಲಿ ಸುತ್ತಾಡುತ್ತಿರುವಾಗ ಎಕೆ-47 ರೈಫಲ್‌ಗಳಿಂದ (AK-47 rifle) ಶಸ್ತ್ರಸಜ್ಜಿತವಾದ ಆರು ಭದ್ರತಾ ಸಿಬ್ಬಂದಿಗಳು ಭದ್ರತೆ ನೀಡಿರುವುದು ಕಂಡುಬಂದಿದೆ.
ಜ್ಯೋತಿ ಮಲ್ಹೋತ್ರಾ ಮತ್ತು ಐಎಸ್‌ಐ ಹ್ಯಾಂಡ್ಲರ್ ಅಲಿ ಹಸನ್ ನಡುವೆ ನಡೆದ ವಾಟ್ಸಪ್ ಚಾಟ್‌ನಲ್ಲಿ ಆಕೆ ಪಾಕಿಸ್ತಾನದಲ್ಲಿ ಮದುವೆ ಮಾಡುವ ಯೋಜನೆಗಳನ್ನು ಹಂಚಿಕೊಂಡಿದ್ದಾಳೆ. ಈ ಸಂಭಾಷಣೆಗಳು ಆಕೆಯ ಪಾಕಿಸ್ತಾನಿ ಗುಪ್ತಚರರೊಂದಿಗೆ ಸಂಬಂಧ ಹೊಂದಿದ್ದಳು ಎನ್ನುವುದು ತಿಳಿದು ಬಂದಿತ್ತು.