ದಾವಣಗೆರೆ : ಕನಕದಾಸರು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಹುಟ್ಟಿದ ಜಾತ್ಯತೀತ ದಾರ್ಶನಿಕ ಸಂತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
537 ನೇ ಕನಕ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಕುರುಬ ಜಾತಿಯಲ್ಲಿ ಹುಟ್ಟಿ ಜಾತಿ ರಹಿತ ಸಮಸಮಾಜಕ್ಕಾಗಿ ಹೋರಾಡಿದ, ಜಾತ್ಯತೀತ ಸಂತ. ಮನುಕುಲದ ಏಳೆಗೆಗಾಗಿ ಶ್ರಮಿಸಿ ದಾಸ ಶ್ರೇಷ್ಠರಾದರು ಎಂದರು.
ಶರಣ ಸಾಹಿತ್ಯದಲ್ಲಿ ಅಣ್ಣ ಬಸವಣ್ಣ, ದಾಸ ಸಾಹಿತ್ಯದಲ್ಲಿ ಕನಕದಾಸರು ಅತ್ಯಂತ ಪ್ರಮುಖರು. ಬುದ್ದನಿಂದ ಕನಕದಾಸರವರೆಗೂ, ಆ ನಂತರವೂ ಬಹಳ ಪುಣ್ಯಾತ್ಮರು ಜಾತಿರಹಿತ ಸಮಾಜಕ್ಕಾಗಿ ಶ್ರಮಿಸಿದ್ದಾರೆ. ಅಂಬೇಡ್ಕರ್, ನಾರಾಯಣಗುರು ಮತ್ತು ಕನಕದಾಸರು ಕೂಡ ಜಾತಿ ವ್ಯವಸ್ಥೆ, ವರ್ಣ ವ್ಯವಸ್ಥೆಯ ಕಾರಣಕ್ಕೆ ಅವಮಾನಿತರಾಗಿದ್ದರು. ಯಾರೂ ಜನ್ಮತಃ ದಡ್ಡರಾಗಿರಲು ಸಾಧ್ಯವಿಲ್ಲ. ಕಾಳಿದಾಸರು ಶಾಕುಂತಲಾ ಬರೆದದ್ದು, ವ್ಯಾಸರು ಮಹಾಭಾರತ ಬರೆದದ್ದು, ವಾಲ್ಮೀಕಿ ರಾಮಾಯಣ ಬರೆದದ್ದೇ ಹುಟ್ಟಿನಿಂದ ಯಾರೂ ದಡ್ಡರಲ್ಲ ಎನ್ನುವುದಕ್ಕೆ ಉದಾಹರಣೆಯಾಗಿದೆ ಎಂದರು.
ಒಬ್ಬರಿಗೆ ಒಂದೇ ಮತ. ಎಲ್ಲಾ ಜಾತಿ, ಧರ್ಮ, ಅಂತಸ್ತಿವರಿಗೂ ಒಂದೇ ಮತ. ಈ ಸಮಾನತೆ ಆರ್ಥಿಕವಾಗಿ, ಸಾಮಾಜಿಕವಾಗಿಯೂ ಜಾರಿ ಆಗಬೇಕು. ಆಗ ಮಾತ್ರ ಸಮಾನತೆ ದಿಕ್ಕಿನಲ್ಲಿ ನಾವು ಮುನ್ನಡೆಯಲು ಸಾಧ್ಯ ಎಂದರು.
ಶೋಷಿತ ಸಮುದಾಯಗಳು ಜಾತಿ ಸಮ್ಮೇಳನ ಮಾಡುವುದು ತಪ್ಪಲ್ಲ. ಆದರೆ ಮುಂದುವರೆದ ಜಾತಿಗಳು ಜಾತಿ ಹೆಸರಲ್ಲಿ ಸಮ್ಮೇಳನ ನಡೆಸುವುದು ಸಾಮಾಜಕವಾಗಿ ತಪ್ಪಾಗುತ್ತದೆ. ಸಂಘಟನೆ-ಒಗ್ಗಟ್ಟು ಇಲ್ಲದಿದ್ದರೆ ಶೋಷಿತ ಸಮುದಾಯಗಳಿಗೆ ಶಕ್ತಿ ಬರುವುದಿಲ್ಲ ಎಂದರು.