ಬೆಂಗಳೂರು : ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ನೈಋತ್ಯ ರೈಲ್ವೆ ವಿಭಾಗದ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡದಿರುವುದು ಮತ್ತೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದ ಅಧಿಕೃತ ಭಾಷೆ ಆಗಿರುವ ಕನ್ನಡವನ್ನು ಕಡೆಗಣಿಸಿ, ಕೇವಲ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಮಾತ್ರ ಆದ್ಯತೆ ನೀಡಿರುವ ರೈಲ್ವೆ ಇಲಾಖೆಯ ಈ ತೀರ್ಮಾನವನ್ನು ಅನ್ಯಾಯವೆಂಬುವುದಾಗಿ ಆರೋಪಿಸಲಾಗಿದೆ.
ಬೆಂಗಳೂರು ರೈಲ್ವೆ ವಿಭಾಗದಲ್ಲಿ ನಡೆಯುತ್ತಿರುವ ಬಡ್ತಿ ಹಾಗೂ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಬಳಸಲು ಅವಕಾಶ ನೀಡದೇ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಮಾತ್ರ ಅನುಮತಿಸಲಾಗಿದೆ. ಇದು ಕರ್ನಾಟಕದ ಅಧಿಕೃತ ಭಾಷಾ ನೀತಿಗೆ ವಿರುದ್ಧ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ, ವಿಶೇಷವಾಗಿ ರಾಜ್ಯ ರಾಜಧಾನಿಯಲ್ಲಿ ಕನ್ನಡವನ್ನು ಹೊರಗಿಟ್ಟಿರುವುದು ತುಂಬಾ ವಿಷಾದಕಾರಿ ಎಂದು ಪರಿಗಣಿಸಲಾಗಿದೆ.
ಡಿ. 11 ರಂದು ನೈಋತ್ಯ ರೈಲ್ವೆ ಇಲಾಖೆಯು ಬೆಂಗಳೂರು ಸೇರಿದಂತೆ ಹಲವು ವಿಭಾಗಗಳಲ್ಲಿ ಸರಕು ಸಾಗಣೆ ರೈಲ್ವೆ ವ್ಯವಸ್ಥಾಪಕ ಹುದ್ದೆಗಾಗಿ ಅರ್ಜಿ ಆಹ್ವಾನಿಸಿತ್ತು. ನಿಯಮ ಪ್ರಕಾರ, ಬಡ್ತಿ ಪರೀಕ್ಷೆಗಳಲ್ಲಿ ಪ್ರಾದೇಶಿಕ ಅಧಿಕೃತ ಭಾಷೆಗೆ ಅವಕಾಶ ನೀಡಬೇಕು. ಮೈಸೂರು ಮತ್ತು ಹುಬ್ಬಳ್ಳಿ ವಿಭಾಗದ ಹುದ್ದೆಗಳಿಗೆ ಕನ್ನಡ ಜೊತೆ ಆಂಗ್ಲ ಮತ್ತು ಹಿಂದಿಯಲ್ಲಿ ಪರೀಕ್ಷೆ ನಡೆಯುತ್ತಿದ್ದರೂ, ಬೇಂಗಳೂರಿನ 317 ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡಿಲ್ಲ.
ರೈಲ್ವೆ ಇಲಾಖೆಯ ಈ ನಿರ್ಧಾರ ಹಿಂದಿವಾಲೆ ಅಭ್ಯರ್ಥಿಗಳಿಗೆ ಅನುಕೂಲವಾಗಿಸಲು ಕೈಗೊಂಡ ಕ್ರಮವೆಂದು ಆರೋಪಿಸಲಾಗುತ್ತಿದೆ. ಇದೇ ಮೂಲಕ 2019 ಡಿ.19 ರ MC 31 ನಿಯಮವನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ.
































