ಸರಕಾರಿ ನೌಕರರಾಗಿ ನೇಮಕಗೊಳ್ಳಲು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರಬಾರದು ಎಂಬ ನಿಯಮವಿದೆ. ಅದೇ ರೀತಿಯ ಆರೋಪ ಹೊತ್ತ ಸರಕಾರಿ ನೌಕರರನ್ನು ವಜಗೊಳಿಸಲು ಯಾವುದೇ ಅಡ್ಡಿ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ಶ್ರೀ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಶ್ರೀ ರಾಮಚಂದ್ರ ಹುದ್ದಾರ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಬೆಂಗಳೂರು ನಗರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ (ಎಸ್ ಡಿ ಎ) ಆಗಿ ಸೇವೆ ಸಲ್ಲಿಸಿ ಶಿಕ್ಷೆಗೆ ಒಳಗಾದ ನಂಜೇಗೌಡ ಎಂಬವರನ್ನು ಸೇವೆಯಿಂದ ವಜಗೊಳಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ನಂಜೇಗೌಡ ಹೈಕೋರ್ಟಿನ ಮೆಟ್ಟಿಲೇರಿದ್ದರು. ಅವರ ಅರ್ಜಿಯನ್ನು ವಿಚಾರಣೆಗೆ ಹೆಚ್ಚಿಕೊಂಡ ನ್ಯಾಯಪೀಠ ಈ ಆದೇಶ ಮಾಡಿದೆ.
ನೈತಿಕತೆಗೆ ಅಸ್ಥಿರತೆಯನ್ನು ಉಂಟುಮಾಡುವಂತಹ ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆ ವಿಧಿಸಿರುವ ಆಧಾರದಲ್ಲಿ ಸೇವೆಯಿಂದ ವಜಾಗೊಳಿಸುವುದನ್ನು ತಡೆಯುವುದಕ್ಕೆ ಅವಕಾಶ ಇಲ್ಲ ಎಂದು ಕರ್ನಾಟಕ ನಾಗರೀಕ ಸೇವೆಗಳ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 14ರಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಗಂಭೀರ ಕ್ರಿಮಿನಲ್ ಅಪರಾಧ ಆರೋಪ ಹೊತ್ತಿರುವ ಅರ್ಜಿದಾರರ ಕೃತ್ಯ ಅವರ ಅಧಿಕೃತ ಕರ್ತವ್ಯಗಳು ಅಥವಾ ಸೇವಾ ಶರತ್ತಿನೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಆ ಕಾರಣದಿಂದ ಅವರನ್ನು ಸರಕಾರಿ ನೌಕರರನ್ನಾಗಿ ಮುಂದುವರಿಸಬೇಕು. ಜೊತೆಗೆ ಗಂಭೀರ ಅಪರಾಧದ ಆರೋಪ ಹೊತ್ತವರನ್ನು ಸರಕಾರಿ ನೌಕರರನ್ನಾಗಿ ಸೇವೆಯಲ್ಲಿ ಮುಂದುವರಿಸಬೇಕು ಎಂದು ಬಯಸುವುದು ಸರಿಯಲ್ಲ. ಇದು ಒಪ್ಪತಕ್ಕ ವಿಷಯವಲ್ಲ ಎಂದು ನ್ಯಾಯಪೀಠ ಆದೇಶ ನೀಡಿದೆ.
ಶಿಕ್ಷೆಯ ಹೊರತಾಯಿಯೂ ಅರ್ಜಿದಾರರನ್ನು ಸೇವೆಯಿಂದ ವಜಾಗೊಳಿಸುವುದಕ್ಕೆ ಕಾರಣ ನೀಡಬೇಕಾಗಿ ಇತ್ತು ಎಂಬ ಅರ್ಜಿದಾರರ ಪರ ವಾದವನ್ನು ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯ ಪೀಠ ತಿರಸ್ಕರಿಸಿದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಸರಕಾರಿ ನೌಕರರನ್ನು ಖುಲಾಸೆಗೊಳಿಸಿದ್ದಾರೆ ಅವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ವಿಚಾರಣೆಗೆ ಒಳಪಡಿಸಬಹುದಾಗಿದೆ ಆದರೆ ಅಪರಾಧ ಕೃತ್ಯದಲ್ಲಿ ವಿಚಾರಣೆ ನಡೆದು ಶಿಕ್ಷೆ ವಿಧಿಸಿರುವ ಸಂದರ್ಭ ದಲ್ಲಿ ಶಿಸ್ತು ಕ್ರಮಕ್ಕಾಗಿ ವಿಚಾರಣೆ ನಡೆಸಬೇಕಾದ ಅಗತ್ಯತೆ ಉಂಟಾಗುವುದಿಲ್ಲ ಎಂದು ನ್ಯಾಯ ಪೀಠ ಪ್ರತಿಪಾದಿಸಿದೆ ಹಾಗೂ ಅರ್ಜಿದಾರರ ಅರ್ಜಿಯನ್ನು ವಜಾಗೊಳಿಸಿದೆ.