ಕಾಂತಾರ ಚಿತ್ರದ ಪ್ರೀಕ್ವೆಲ್ ಕಾಂತಾರ-2 ಚಿತ್ರೀಕರಣದ ವೇಳೆ ದುರಂತ ಸಂಭವಿಸಿದ್ದು, ಈ ಮೂಲಕ ಕಾಂತಾರ ಸಿನಿಮಾ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ತೀವ್ರ ಆಘಾತವಾಗಿದೆ.
ಶೂಟಿಂಗ್ ಸೆಟ್‌ನಲ್ಲಿದ್ದ ಓರ್ವ ಜೂನಿಯರ್ ಕಲಾವಿದ ಸಾವನ್ನಪ್ಪಿದ್ದಾರೆ. ಕೇರಳ ಮೂಲದ ಕಪಿಲ್ ಎಂಬ ಜೂನಿಯರ್ ಆರ್ಟಿಸ್ಟ್ ಬೈಂದೂರಿನ ಕೊಲ್ಲೂರಿನಲ್ಲಿ ಸೌಪರ್ಣಿಕ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಚಿತ್ರೀಕರಣದ ಸಮಯದಲ್ಲಿ ಈಜುವ ದೃಶ್ಯಗಳನ್ನು ಸೆರೆ ಹಿಡಿಯುವಾಗ ಕಪಿಲ್ ಹಾಗೂ ಅವರ ತಂಡದವರು ನೀರಿನ ಆಳ ತಿಳಿಯದೆ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಸಂಜೆ 4ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಕಪಿಲ್ ಜೊತೆಗೆ ಹೋಗಿದ್ದ ಕಲಾವಿದರು ಸುರಕ್ಷಿತವಾಗಿ ನದಿಯ ದಡ ಸೇರಿದ ಬೆನ್ನಲ್ಲೇ ಸಮೀಪದ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಅಗ್ನಿಶಾಮಕ ದಳದ ಸಿಬ್ಬಂದಿಯೂ ಆಗಿಮಿಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ರಾತ್ರಿ 7ರ ಸುಮಾರಿಗೆ ಕಪಿಲ್ ಮೃತದೇಹವನ್ನು ಪತ್ತೆ ಹಚ್ಚಿ ಹೊರತೆಗೆದಿದ್ದಾರೆ. ಪ್ರಸ್ತುತ ಕಪಿಲ್ ಮೃತದೇಹವನ್ನು ಬೈಂದೂರಿನ ಸರ್ಕಾರಿ ತಾಲೂಕು ಆಸ್ಪತ್ರೆಯ ಮಾರ್ಚುರಿಯಲ್ಲಿ ಇರಿಸಲಾಗಿದೆ. ಮೇ 7ರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕವೇ ಅವರ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.