ಕಾಪು: ನಕಲಿ ದಾಖಲೆ ಸೃಷ್ಟಿಸಿ, ಸಹಿ ಫೋರ್ಜರಿ ಮಾಡಿ ಸಹಕಾರಿ ಬ್ಯಾಂಕೊಂದರಿಂದ 45 ಲಕ್ಷ ರೂ. ಹಣ ಪಡೆದು ವಂಚಿಸಿರುವ ಘಟನೆ ಕಟಪಾಡಿಯಲ್ಲಿ ನಡೆದಿದ್ದು ಕಾಪು ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ರಿಯಾನತ್ ಬಾನು ಹಾಗೂ ಆಕೆಯ ಪತಿ ನೂಮನ್ ಇಸ್ಮಾಯಿಲ್ ಸಾಲ ಪಡೆದು ವಂಚಿಸಿರುವ ಆರೋಪಿಗಳು.
ಆರೋಪಿಗಳು ಅವರು ಕಟಪಾಡಿ ಸಹಕಾರಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಅವರಿಗೆ ದಿನೇಶ್ ಮತ್ತು ರಾಜೇಶ್ ಜಾಮೀನುದಾರರಾಗಿದ್ದರು. ಸಾಲ ಪಡೆದ ಆರೋಪಿಗಳು ಮೂರು ತಿಂಗಳ ಮಾಸಿಕ ಕಂತನ್ನು ಸಂಘಕ್ಕೆ ಪಾವತಿಸಿದ್ದು ನಂತರದ ಕಂತನ್ನು ಪಾವತಿ ಮಾಡಿರಲಿಲ್ಲ.
ಸಂಘದವರಿಗೆ ಆರೋಪಿಗಳ ಮೇಲೆ ಅನುಮಾನ ಬಂದು ಅವರು ನೀಡಿರುವ ದಾಖಲೆಗಳನ್ನು ಸಂಬಂಧಪಟ್ಟ ಸರಕಾರಿ ಅಧಿಕಾರಿಗಳೊಂದಿಗೆ ಪರಿಶೀಲಿಸಿದ್ದಾರೆ. ಈ ವೇಳೆ ಆರೋಪಿಗಳು ಸಾಲ ತೆಗೆದುಕೊಳ್ಳುವ ಉದ್ದೇಶಕ್ಕಾಗಿ ನಕಲಿ ದಾಖಲೆ ಸೃಷ್ಟಿಸಿ, ಸಹಿ ಫೋರ್ಜರಿ ಮಾಡಿರುವುದು ತಿಳಿದುಬಂದಿದೆ.
ಈ ಸಂಬಂಧ ಸಂಘದ ಶಾಖಾ ಪ್ರಧಾನ ವ್ಯವಸ್ಥಾಪಕ ಮೊದಿನ್ ಡಿ ಖಾನ್ ಅವರು ಕಾಪು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರು ನೀಡಿದ ದೂರಿನಂತೆ 4 ಮಂದಿ ಆರೋಪಿಗಳ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.