ಬೆಂಗಳೂರು : ದೇಶದ ಹಲವು ರಾಜ್ಯಗಳಲ್ಲಿ ನಿಪಾ ವೈರಸ್ ಮತ್ತೆ ಕಾಣಿಸಿಕೊಂಡಿರುವ ವರದಿಗಳ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ಸಂಪೂರ್ಣ ಕಟ್ಟೆಚ್ಚರಕ್ಕೆ ಮುಂದಾಗಿದೆ. ವೈರಸ್ ರಾಜ್ಯಕ್ಕೆ ಪ್ರವೇಶಿಸದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಬಿಗಿಗೊಳಿಸಲಾಗಿದ್ದು, ಶಂಕಿತ ಪ್ರಕರಣಗಳ ಮೇಲೆ ನಿಕಟ ನಿಗಾವಹಿಸುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಸೋಂಕಿತ ಬಾವಲಿಗಳು ಭಾಗಶಃ ತಿಂದ ಹಣ್ಣುಗಳನ್ನು ಸೇವಿಸುವುದು ಅಥವಾ ಹಂದಿಮಾಂಸ ಸೇವನೆಯಿಂದ ನಿಪಾ ವೈರಸ್ ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ. ಕೆಲವು ಸಂದರ್ಭಗಳಲ್ಲಿ ಮನುಷ್ಯರಿಂದ ಮನುಷ್ಯರಿಗೆ ಸೋಂಕು ಹರಡುವಿಕೆಯೂ ವರದಿಯಾಗಿದೆ. ಆತಂಕಕಾರಿ ಅಂಶವೆಂದರೆ ನಿಫಾ ವೈರಸ್‌ನ ಮರಣ ಪ್ರಮಾಣ ಶೇಕಡಾ 60ರಿಂದ 75ರವರೆಗೆ ಇರುವುದಾಗಿ ಅಂದಾಜಿಸಲಾಗಿದೆ.
ನಿಫಾ ವೈರಸ್ ಸೋಂಕಿನ ಲಕ್ಷಣಗಳ ಕುರಿತು ಆರೋಗ್ಯ ಇಲಾಖೆ ವಿವರ ನೀಡಿದ್ದು, ಜ್ವರ, ದೇಹದ ನೋವು, ಆಯಾಸ, ತಲೆನೋವು, ಶೀತ, ಗಂಟಲು ಕಿರಿಕಿರಿ ಅಥವಾ ನೋವು, ಹಾಗೂ ಕತ್ತಿನ ಹಿಂಭಾಗದಲ್ಲಿ ಬಿಗಿತ ಅಥವಾ ನೋವು ಕಾಣಿಸಿಕೊಳ್ಳಬಹುದು ಎಂದು ತಿಳಿಸಿದೆ. ಸೋಂಕಿನ ಲಕ್ಷಣಗಳು ತಕ್ಷಣ ಕಾಣಿಸಿಕೊಳ್ಳದೇ ಸಾಮಾನ್ಯವಾಗಿ 4ರಿಂದ 14 ದಿನಗಳ ಒಳಗೆ ಗೋಚರವಾಗುತ್ತವೆ.
ಆಗ್ನೇಯ ಏಷ್ಯಾದ ಹಲವು ರಾಷ್ಟ್ರಗಳಲ್ಲಿ ನಿಫಾ ವೈರಸ್ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಬಾವಲಿಗಳ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಸಂಚಾರವನ್ನು ತಪ್ಪಿಸಲು ಮತ್ತು ಮರದ ರಸದಿಂದ ತಯಾರಿಸಿದ ಪಾನೀಯಗಳನ್ನು ಸದ್ಯಕ್ಕೆ ಸೇವಿಸದಂತೆ ಸೂಚಿಸಲಾಗಿದೆ. ಬಾವಲಿಗಳು ಕಚ್ಚಿದ ಅಥವಾ ಭಾಗಶಃ ತಿಂದ ಹಣ್ಣುಗಳನ್ನು ಸೇವಿಸಬಾರದೆಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಮುನ್ನೆಚ್ಚರಿಕಾ ಕ್ರಮಗಳಾಗಿ, ಹಣ್ಣುಗಳನ್ನು ಸೇವಿಸುವ ಮೊದಲು ಚೆನ್ನಾಗಿ ತೊಳೆಯುವುದು, ಕುದಿಸಿ ತಣ್ಣಗಾದ ನೀರನ್ನು ಕುಡಿಯುವುದು, ಪಶು ಆಹಾರವು ಬಾವಲಿಗಳ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳುವುದು, ಪ್ರಾಣಿಗಳನ್ನು ನಿರ್ವಹಿಸುವಾಗ ರಕ್ಷಣಾತ್ಮಕ ಉಡುಪು ಧರಿಸುವುದು ಮತ್ತು ಸೋಂಕಿತ ವ್ಯಕ್ತಿಗಳ ಸಂಪರ್ಕದಲ್ಲಿರುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ.
ಅದೇ ವೇಳೆ, ಮರಗಳಿಂದ ಬಿದ್ದ ಅಥವಾ ಪ್ರಾಣಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸದಿರುವುದು, ತೆರೆದ ಪಾತ್ರೆಗಳಲ್ಲಿ ಇರಿಸಲಾದ ಪಾನೀಯಗಳನ್ನು ತಪ್ಪಿಸುವುದು, ನಿಪಾ ವೈರಸ್ ಸೋಂಕಿತ ವ್ಯಕ್ತಿಗಳ ಸಂಪರ್ಕಕ್ಕೆ ಬಾರದಿರುವುದು ಹಾಗೂ ಅನಾರೋಗ್ಯ ಪೀಡಿತ ಅಥವಾ ಸತ್ತ ಪ್ರಾಣಿಗಳಿಂದ ದೂರವಿರುವುದು ಅತ್ಯಂತ ಮುಖ್ಯ ಎಂದು ತಿಳಿಸಲಾಗಿದೆ.
ಶಂಕಿತ ಅಥವಾ ದೃಢಪಟ್ಟ ಪ್ರಕರಣಗಳು ಪತ್ತೆಯಾದಲ್ಲಿ ಚಿಕಿತ್ಸೆಗಾಗಿ ಅಗತ್ಯ ಸೌಲಭ್ಯಗಳು ಸಿದ್ಧವಾಗಿರುವಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಸಿದ್ಧತೆಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದೆ.

































