ಶ್ರೀನಗರ: ಪಹಲ್ಗಾಮ್ ದಾಳಿಯ ಮಾದರಿಯಲ್ಲೇ ಉಗ್ರರು ಇನ್ನಷ್ಟು ಪ್ರವಾಸಿ ತಾಣಗಳ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ಗುಪ್ತಚರ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ಸರಕಾರ 48 ಪ್ರವಾಸಿ ತಾಣಗಳನ್ನು ಮುಚ್ಚಿದೆ. ಕಾಶ್ಮೀರದಲ್ಲಿ ಒಟ್ಟು 87 ಪ್ರಮುಖ ಪ್ರವಾಸಿ ತಾಣಗಳಿದ್ದು, ಈ ಪೈಕಿ 47 ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುವುದನ್ನು ನಿರ್ಬಂಧಿಸಿ ಸರಕಾರ ಆದೇಶ ಹೊರಡಿಸಿದೆ.
ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಕಾಶ್ಮೀರ ಕಣಿವೆಯಲ್ಲಿರುವ ಕೆಲವು ಸ್ಲೀಪರ್ ಸೆಲ್ಗಳು ಸಕ್ರಿಯವಾಗಿವೆ. ಉಗ್ರರು ಇನ್ನಷ್ಟು ದಾಳಿಗಳನ್ನು ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ಮಾಹಿತಿ ಲಭ್ಯವಾಗಿದೆ. ಭದ್ರತಾ ಪಡೆ ಮತ್ತು ಸ್ಥಳೀಯರಲ್ಲದವರ ಮೇಲೆ ದಾಳಿ ಮಾಡಲು ಉಗ್ರರು ತಯಾರಿ ನಡೆಸುತ್ತಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿ ಗುಪ್ತಚರ ಏಜೆನ್ಸಿಗಳಿಂದ ಸಿಕ್ಕಿದೆ. ಏ.22ರ ಉಗ್ರರ ದಾಳಿಯ ಬಳಿಕ ಸ್ಯಾಟಲೈಟ್ ಸಂವಾದಗಳ ಮೇಲೆ ನಿಗಾ ಇಡಲಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಪಾಕಿಸ್ಥಾನದ ಗೂಢಚಾರಿಕೆ ಸಂಸ್ಥೆ ಐಎಸ್ಐ ನಿರ್ದಿಷ್ವಾಗಿ ಶ್ರೀನಗರ ಮತ್ತು ಗಂದೆರ್ಬಾಲ್ ಜಿಲ್ಲೆಗಳಲ್ಲಿ ಕಾಶ್ಮೀರಿ ಪಂಡಿತರು ಮತ್ತು ಪ್ರವಾಸಿಗರ ಮೇಲೆ ದಾಳಿ ಮಾಡಲು ಯೋಜನೆ ತಯಾರಿಸುತ್ತಿದೆ ಎಂಬ ಖಚಿತ ಮಾಹಿತಿಯನ್ನು ಗುಪ್ತಚರ ಪಡೆಗಳು ನೀಡಿವೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.