ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತಿರುವ 2023- 24ನೇ ಸಾಲಿನ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಸಂಬಂಧ ಮುಖ್ಯ ಪರೀಕ್ಷೆ ನಡೆಸುವ ಪ್ರಕ್ರಿಯೆಗೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಅನುಮತಿ ನೀಡಿದೆ.
ನೇಮಕಾತಿ ಪ್ರಕ್ರಿಯೆ ಪ್ರಶ್ನಿಸಿ ಪವಿತ್ರಾ ಮತ್ತು ಇತರ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೆಎಟಿ ನ್ಯಾಯಾಂಗ ಸದಸ್ಯ ಎಸ್.ವೈ. ವಟವಟಿ ಅವರಿದ್ದ ವಿಭಾಗೀಯ ಪೀಠ ಮುಖ್ಯ ಪರೀಕ್ಷೆ ನಡೆಸಲು ಲೋಕಸೇವಾ ಆಯೋಗ ಹೊರಡಿಸಿದ ಅಧಿಸೂಚನೆಯನ್ನು ಅಮಾನತಿನಲ್ಲಿ ಇರಿಸಿ ಫೆಬ್ರವರಿ 18ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಮಾರ್ಪಡಿಸಿದೆ.
ಜೊತೆಗೆ ಮುಖ್ಯ ಪರೀಕ್ಷೆಗೆ ಅರ್ಜಿ ಭರ್ತಿ ಮಾಡಲು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದೆ. ಆದರೆ, ಅರ್ಜಿ ತುಂಬುವ ಪ್ರಕ್ರಿಯೆ ಅರ್ಜಿ ಕುರಿತು ತಾನು ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿ ಸೋಮವಾರಕ್ಕೆ ವಿಚಾರಣೆ ಮುಂದೂಡಲಾಗಿದೆ.