ತಿರುವನಂತಪುರ : 2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. ಇಡೀ ದೇಶಾದ್ಯಂತ ಸಂಚಲನ ಮೂಡಿಸಿದ್ದ ‘ದಿ ಕೇರಳ ಸ್ಟೋರಿ’ ಸಿನಿಮಾದ ಸುದಿತ್ತೋ ಸೇನ್ ಅವರಿಗೆ ‘ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ’ ಹಾಗೂ ‘ಅತ್ಯುತ್ತಮ ಛಾಯಾಗ್ರಹಣ’ ಪ್ರಶಸ್ತಿ ನೀಡಿರುವುದನ್ನು ಕೇರಳದ ಸಿಎಂ ಪಿಣರಾಯಿ ವಿಜಯನ್ ಖಂಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ಕೋಮುವಾದ ಪ್ರಚೋದಿಸಲು ಹಾಗೂ ಕೇರಳಕ್ಕೆ ಅವಹೇಳನ ಮಾಡಲು ಯತ್ನಿಸಿದ್ದ ಸಿನಿಮಾವನ್ನ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ, ರಾಷ್ಟ್ರೀಯ ಸಮಗ್ರತೆ ಮತ್ತು ಕೋಮು ಸಾಮರಸ್ಯಕ್ಕೆ ಹೆಸರಾದ ಭಾರತೀಯ ಸಿನಿಮಾ ರಂಗವನ್ನ ತೀರ್ಪುಗಾರರು ಅವಮಾನಿಸಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.
2023ರಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರ ತೆರೆಕಂಡಿತ್ತು. ರಾಜ್ಯದ ಸುಮಾರು 32,000 ಮಹಿಳೆಯರನ್ನು ಮತಾಂತರಗೊಳಿಸಿ, ಭಯೋತ್ಪಾದನಾ ಸಂಘಟನೆಗೆ ಸೇರಿಸಲಾಗಿದೆ ಎಂದು ಚಿತ್ರದ ಟೀಸರ್‌ನಲ್ಲಿ ಉಲ್ಲೇಖಿಸಲಾಗಿತ್ತು. ಈ ಚಿತ್ರದ ಬೆನ್ನಲ್ಲೇ ಕೇರಳದಲ್ಲಿ ಭಾರೀ ಪ್ರತಿಭಟನೆ ನಡೆದಿದ್ದು, ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.