ತಿರುವನಂತಪುರಂ: ಯೆಮೆನ್ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಬಿಡುಗಡೆಗೆ ತಕ್ಷಣ ಮಧ್ಯಪ್ರವೇಶಿಸುವಂತೆ ಕೋರಿ ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
ನಿಮಿಷಾ ಪ್ರಿಯಾ ಅವರು ತಮ್ಮ ವ್ಯವಹಾರ ಪಾಲುದಾರರಾದ ತಲಾಲ್ ಅಬ್ದೋ ಮಹ್ದಿ ಅವರ ಕೊಲೆಗೆ ಸಂಬಂಧಿಸಿ ಯೆಮೆನ್ನಲ್ಲಿ ಮರಣದಂಡನೆ ಶಿಕ್ಷೆ ಎದುರಿಸುತ್ತಿದ್ದಾರೆ. 2017ರ ಜುಲೈನಲ್ಲಿ ನಿಮಿಷಾ ಪ್ರಿಯಾಳನ್ನು ಬಂಧಿಸಲಾಗಿತ್ತು. 2020ರಲ್ಲಿ ಯೆಮನ್ ನ್ಯಾಯಾಲಯ ಆಕೆಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಜುಲೈ 16ರಂದು ನಿಮಿಷಾ ಪ್ರಿಯಾಳನ್ನು ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಯೆಮೆನ್ನ ಜೈಲು ಅಧಿಕಾರಿಗಳು ತಿಳಿಸಿದ್ದರು.
ನಿಮಿಷಾ ಪ್ರಿಯಾ ಅವರನ್ನು ರಕ್ಷಿಸಲು ಮಧ್ಯಪ್ರವೇಶಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸೋಮವಾರ ಸುಪ್ರೀಂ ಕೋರ್ಟ್ಲ್ಲಿ ನಡೆಯಲಿದೆ.