ನವದೆಹಲಿ: ಕೇರಳದ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಯೆಮೆನ್‌ನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಅಲ್ಲಿನ ಅಧ್ಯಕ್ಷರು ಈ ಶಿಕ್ಷೆಯನ್ನು ಅನುಮೋದಿಸಿಯೂ ಆಗಿದೆ. ಈ ಕುರಿತು ಕೇಂದ್ರ ವಿದೇಶಾಂಗ ಸಚಿವಾಲಯವು ಹೇಳಿಕೆ ಬಿಡುಗಡೆ ಮಾಡಿದೆ.
ನಿಮಿಷಾ ಪ್ರಿಯಾ ಅವರ ಕುಟುಂಬಕ್ಕೆ ಸಹಾಯ ಹಸ್ತ ಚಾಚಲಾಗುವುದು ಎಂದಿದ್ದಾರೆ. ವ್ಯಾಪಾರ ಪಾಲುದಾರ ತಲಾಲ್ ಅಬ್ದೋ ಮಹದಿ ಎಂಬಾತನಿಗೆ ನಿಮಿಷಾ ನಿದ್ರಾಜನಕ ಇಂಜೆಕ್ಷನ್ ಮಾಡಿದ್ದಾಳೆ ಎನ್ನಲಾಗಿದೆ.
ಇದರ ಓವರ್ ಡೋಸ್‌ನಿಂದ ಮಹದಿ ಮೃತಪಟ್ಟಿದ್ದಾನೆ. ಈ ಹಿನ್ನೆಲೆ ಯೆಮೆನ್ ನ್ಯಾಯಾಲಯವು ನಿಮಿಷಾ ಪ್ರಿಯಾಗೆ ಮರಣ ದಂಡನೆ ವಿಧಿಸಿದೆ. ಈ ಶಿಕ್ಷೆಯನ್ನು ಯೆಮೆನ್ ಅಧ್ಯಕ್ಷ ರಶಾದ್-ಅಲ್-ಅಲಿಮಿ ಅನುಮೋದಿಸಿದ್ದಾರೆ.
ಈ ಹಿನ್ನೆಲೆ ನಿಮಿಷಾ ಕುಟುಂಬದವರು ಸಂದಿಗ್ಧತೆಗೆ ಸಿಲುಕಿದ್ದಾರೆ. ನಿಮಿಷಾ ಬಿಡುಗಡೆ ಸಾಧ್ಯವಿದೆ. ಆದರೆ ಅದಕ್ಕೆ ಮೃತ ವ್ಯಕ್ತಿಯ ಬುಡಕಟ್ಟು ಸಮುದಾಯದ ಮುಖಂಡರು ನಿಮಿಷಾಗೆ ಕ್ಷಮಾದಾನ ನೀಡಬೇಕಿದೆ. ಅದಕ್ಕೆ ಪ್ರತಿಯಾಗಿ ಪರಿಹಾರದ ಹಣ ಸ್ವೀಕರಿಸಿದ್ದಲ್ಲಿ ಅಕೆಯ ಮರಣದಂಡನೆ ಶಿಕ್ಷೆಯನ್ನು ಮನ್ನಾ ಮಾಡುವ ಸಾಧ್ಯತೆ ಇದೆ. ಈ ನಡುವೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಧ್ಯ ಪ್ರವೇಶಿಸಿದೆ.
ಯೆಮೆನ್ ಅಧ್ಯಕ್ಷರು ನಿಮಿಷಾ ಪ್ರಿಯಾಗೆ ಮರಣ ದಂಡನೆ ಶಿಕ್ಷೆ ವಿಧಿಸಿರುವುದು ನಮಗೆ ತಿಳಿದಿದೆ. ಅವರ ಕುಟುಂಬಸ್ಥರು ನಿಮಿಷಾ ಅವರನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಆಯ್ಕೆಗಳನ್ನು ನೋಡುತ್ತಿದೆ. ನಮ್ಮ ಸರಕಾರ ಈ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಾಯ ಹಸ್ತ ಚಾಚಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿದೆ.