ಚಿತ್ರದುರ್ಗ: ಹವಾಮಾನ ವೈಪರಿತ್ಯ ಆಧಾರಿತ ಬೆಳೆ ವಿಮೆ ಪಾವತಿಗೆ ನ.30ರ ಗಡುವು ನಿಗದಿ ಮಾಡಲಾಗಿದೆ. ಜಿಲ್ಲೆಯಲ್ಲಿ 2018-19ನೇ ಸಾಲಿನಿಂದ 2023-24ನೇ ಸಾಲಿನ ವರೆಗೆ ಒಟ್ಟು 514 ರೈತರಿಗೆ ತೋಟಗಾರಿಕೆ ಬೆಳೆ ವಿಮೆ ಪಾವತಿ ಬಾಕಿಯಿದೆ. ನ.30ರ ಒಳಗೆ ರೈತರ ಖಾತೆಗೆ ಜಮೆ ಮಾಡಿದ್ದರೆ ಹಣ ವಾಪಸ್ಸು ಹೊಗಲಿದೆ. ಇದರಿಂದ ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ವಿಮಾ ಕಂಪನಿಯಿಂದ ರೈತರಿಗೆ ಪಾವತಿಸಲು ಹಣ ಬಿಡುಗಡೆ ಮಾಡಲಾಗಿದೆ. ಆದರೆ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಕೃಷಿ ಕ್ಷೇತ್ರಾಧಿಕಾರಿಗಳ ಲಾಗಿನ್‍ನಲ್ಲಿ ಹಣವಿದ್ದು, ಬ್ಯಾಂಕ್ ಅಧಿಕಾರಿಗಳಿಂದಲೇ ವಿಳಂಬವಾಗಿದೆ. ತೋಟಗಾರಿಕೆ ಇಲಾಖೆಯಿಂದ ಎಲ್ಲ ರೈತರ ಮಾಹಿತಿ ನೀಡಿ, ಬ್ಯಾಂಕುಗಳೊಂದಿಗೆ ಸಮನ್ವಯ ಕೈಗೊಳ್ಳಲು ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಸಭೆಯಲ್ಲಿ ಮಾಹಿತಿ ನೀಡಿದರು.
ಪಿ.ಎಂ. ಸ್ವ-ನಿಧಿ ಹಾಗೂ ಪಿ.ಎಂ. ವಿಶ್ವಕರ್ಮ ಯೋಜನೆ ಸೇರಿದಂತೆ ವಿವಿಧ ಇಲಾಖೆ ಹಾಗೂ ನಿಗಮಗಳ ಸ್ಕೀಂಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಿ, ಸೌಲಭ್ಯ ನೀಡುವಂತೆ ಸಂಸದ ಗೋವಿಂದ ಎಂ ಕಾರಜೋಳ ಸೂಚಿಸಿದರು.
ಜಿಲ್ಲೆಯಲ್ಲಿ ಹಲವು ಇಲಾಖೆಗಳಲ್ಲಿ ಕ್ಲೇಮ್ ಮಾಡದೆ ಇರುವ 93 ಬ್ಯಾಂಕ್ ಖಾತೆಗಳು ಇದ್ದು, ಆದ್ಯತೆ ಮೇರೆಗೆ ದಿನಾಂಕ ನಿಗದಿಪಡಿಸಿ ಕೈವೈಸಿ ಮಾಡುವ ಮೂಲಕ ಖಾತೆಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್ ಸೂಚಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಕುಮಾರ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಆರ್.ಬಿ.ಐ. ಪ್ರಬಂಧಕ ಅರುಣ್ ಕುಮಾರ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಕವಿತಾ ಸೇರಿದಂತೆ ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳು ಉಪಸ್ಥಿತರಿದ್ದರು.