ಚಿತ್ರದುರ್ಗ: ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಹಾಗು ಸ್ನಾತಕೋತ್ತರ ಅಧ್ಯಯನ ವಿಭಾಗಗಳು, ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ ) ಸಂಯುಕ್ತಾಶ್ರಯದಲ್ಲಿ ದಿನಾಂಕ 17-02-2025 ರಂದು ಏರುಹೊತ್ತು 10.30 ಕ್ಕೆ ಪಿ. ಜಿ. ಸಭಾಂಗಣದಲ್ಲಿ ” ಕಿಲಾರಿ ಕಲರವ ” ಪಶುಪಾಲಕ ಬುಡಕಟ್ಟು ಕಿಲಾರಿಗಳ ಅಸ್ಮಿತೆ : ವಿಚಾರ ಮಾತುಕತೆ ಹಾಡಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ ಮಲ್ಲಿಕಾರ್ಜುನ ಕಲಮರಹಳ್ಳಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಧ್ಯ ಕರ್ನಾಟಕದ ಪ್ರಮುಖ ಬುಡಕಟ್ಟುಗಳಾದ ಕಾಡುಗೊಲ್ಲರು ಮ್ಯಾಸಬೇಡರ ಪಾರಂಪರಿಕ ಆಚರಣಾ ವಿಧಿ ವಿಧಾನಗಳಲ್ಲಿ ಕಿಲಾರಿ ಸಂಪ್ರದಾಯವು ಪ್ರಧಾನ ಹಾಗೂ ಮಹತ್ವಪೂರ್ಣವಾಗಿದೆ. ಕಾಡುಗೊಲ್ಲ ಬುಡಕಟ್ಟಿನಲ್ಲಿ ಇತ್ತೀಚೆಗೆ ಈ ಸಂಪ್ರದಾಯ ವಿರಳವಾಗುತ್ತಿದೆ. ಮ್ಯಾಸ ಬೇಡ ಬುಡಕಟ್ಟಿನಲ್ಲಿ ಇಂದಿಗೂ ಕಟ್ಟುನಿಟ್ಟಿನ ಆಚರಣೆಯನ್ನು ಉಳಿಸಿಕೊಳ್ಳಲಾಗಿದೆ. ಗಾದ್ರಿ ಪಾಲನಾಯಕ, ಜಗಳೂರು ಪಾಪನಾಯಕ, ಯರಮಂಚಿ ನಾಯಕ ನಲಗೇತ ಎರಗಯ್ಯ ಮುಂತಾದ ಸಾಂಸ್ಕೃತಿಕ ಅಧಿ ಧೈವಗಳ ಹೆಸರಿನಲ್ಲಿ ಆಚರಣಾತ್ಮಕ ನೆಲೆಯೊಳಗೆ ಗೋವುಗಳನ್ನು ಎತ್ತುಗಳನ್ನು ಹರಕೆ ರೂಪದಲ್ಲಿ ಹಟ್ಟಿಗಳಿಗೆ ಸೇರಿಸಲಾಗುತ್ತದೆ .
ಈ ಮಾದರಿಯ ದೇವರೆತ್ತುಗಳನ್ನು ವಿಧಿ ಬದ್ಧವಾಗಿ ಪೂಜನೀಯವಾಗಿ ಪಾಲನೆ ಪೋಷಣೆ ಮಾಡುವವರನ್ನು ಕಿಲಾರಿಗಳೆಂದು ಕರೆಯಲಾಗುತ್ತಿದೆ. ಈ ಕಿಲಾರಿಗಳು ಪಶುಪಾಲನೆ ಬಗ್ಗೆ ಅಪಾರ ತಿಳುವಳಿಕೆ, ಜ್ಞಾನ ಹೊಂದಿದ್ದು ಅಗಾಧವಾದ ಮೌಖಿಕ ಸಾಹಿತ್ಯವು ಇವರಲ್ಲಿ ಪ್ರಚಲಿತದಲ್ಲಿದೆ.
ಇಂತಹ ವಿಶಿಷ್ಟ ಪರಂಪರೆಯ ಬಗ್ಗೆ ಶೈಕ್ಷಣಿಕ ಚೌಕಟ್ಟಿನಲ್ಲಿ ಕಿಲಾರಿಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರಸ್ತುತ ಪಡಿಸುತ್ತಿರುವುದು ಇದೇ ಮೊದಲಬಾರಿ ಎಂಬ ಹೆಗ್ಗಳಿಕೆ ಜಾನಪದ ಅಕಾಡೆಮಿಗೆ ಇದೆ. ಕರ್ನಾಟಕ ಜಾನಪದ ಅಕಾಡೆಮಿ ವರ್ತಮಾನದ ಗುಣಾತ್ಮಕ ಹೊಸ ಹೆಜ್ಜೆಗಳಿಗೆ ಸದಾ ತೆರೆದುಕೊಂಡಿರುತ್ತದೆ.