ಬೆಂಗಳೂರು : ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳು-ಹಾಲು, ಮೊಸರು, ತುಪ್ಪ, ಬೆಣ್ಣೆ-ರಾಜ್ಯದಲ್ಲಿಗಷ್ಟೇ ಸೀಮಿತವಾಗದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ತನ್ನ ಗುಣಮಟ್ಟಕ್ಕಾಗಿ ಹೆಸರು ಪಡೆದಿವೆ. ತಿರುಪತಿ ಲಡ್ಡು ತಯಾರಿಕೆಯಲ್ಲಿ ಸಹ ನಂದಿನಿ ತುಪ್ಪವನ್ನು ಬಳಸಲಾಗುವುದು ಎಂಬುದು ಅದರ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಹಿನ್ನೆಲೆಯಲ್ಲಿ, ನಂದಿನಿ ಮಳಿಗೆಗಳು ಕೇವಲ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಮಾತ್ರ ಮೀಸಲಾಗಿರಬೇಕೆಂಬ ನಿಯಮ ಇದ್ದರೂ, ಇತ್ತೀಚೆಗೆ ಹಲವೆಡೆ ಬೂತ್‌ಗಳಲ್ಲಿ ಇತರೆ ಬ್ರ್ಯಾಂಡ್‌ಗಳ ಉತ್ಪನ್ನಗಳೂ ಮಾರಾಟವಾಗುತ್ತಿರುವುದು ಕೆಎಂಎಫ್ ಗಮನಕ್ಕೆ ಬಂದಿದೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ, ನಂದಿನಿ ಬೂತ್‌ಗಳಲ್ಲಿ ಬೇರೆಯ ಬ್ರ್ಯಾಂಡ್‌ಗಳ ಉತ್ಪನ್ನ ಮಾರಾಟಕ್ಕೆ ಕಟ್ಟುನಿಟ್ಟಿನ ನಿಬಂಧನೆ ಜಾರಿಗೊಳಿಸಲು ಕೆಎಂಎಫ್ ಮುಂದಾಗಿದೆ. ಬೂತ್ ಮಾಲೀಕರು ನಂದಿನಿ ಹೊರತುಪಡಿಸಿ ಬೇರೆ ಉತ್ಪನ್ನಗಳನ್ನು ಮಾರುತ್ತಿದ್ದರೆ ನೋಟಿಸ್ ನೀಡಲಾಗುವುದಷ್ಟೇ ಅಲ್ಲ, ನಿಯಮ ಉಲ್ಲಂಘನೆ ಮುಂದುವರಿದರೆ ಲೈಸೆನ್ಸ್‌ನ್ನೇ ರದ್ದುಪಡಿಸಲಾಗುವುದು ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಹಲವು ಬೂತ್‌ಗಳಲ್ಲಿ ನಂದಿನಿ ಉತ್ಪನ್ನಗಳ ಜೊತೆಗೆ ಬಿಸ್ಕತ್, ತಿಂಡಿ, ಜ್ಯೂಸ್, ನೀರಿನ ಬಾಟಲಿ ಸೇರಿದಂತೆ ಬೇರೆ ಬ್ರಾಂಡ್‌ಗಳ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಕೆಎಂಎಫ್‌ಗೆ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ಎಲ್ಲಾ ನಿಯಮ ಉಲ್ಲಂಘಿಸಿದ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ. ನೋಟಿಸ್‌ನ್ನು ಗಂಭೀರವಾಗಿ ಪರಿಗಣಿಸದೆ ಮುಂದುವರಿದರೆ ನಂದಿನಿ ಬೂತ್‌ಗಳ ಅನುಮತಿ ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಈ ಕುರಿತು ಮನವಿ ಮಾಡಿರುವ ಕೆಲವು ಬೂತ್ ಮಾಲೀಕರು, “ಬೂತ್‌ಗಳ ಬಾಡಿಗೆ ಹೆಚ್ಚಿದ್ದು, ಕೇವಲ ನಂದಿನಿ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಿದರೆ ಲಾಭ ಕಡಿಮೆ. ಆದರೂ ಕೆಎಂಎಫ್ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಮುಂದಿನಿಂದ ಇತರೆ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ” ಎಂದು ತಿಳಿಸಿದ್ದಾರೆ.
ನಂದಿನಿ ಉತ್ಪನ್ನಗಳ ವಿಶೇಷತೆಯನ್ನು ಮತ್ತು ಬ್ರ್ಯಾಂಡ್ ಪ್ರಾಮಾಣಿಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೆಎಂಎಫ್ ತೆಗೆದುಕೊಂಡಿರುವ ಈ ಕ್ರಮ ರಾಜ್ಯದ ಹಾಲು ಉತ್ಪಾದನಾ ವ್ಯವಸ್ಥೆಯ ಶಿಸ್ತು ಮತ್ತು ಗುಣಮಟ್ಟವನ್ನು ಉಳಿಸುವತ್ತ ಮಹತ್ವದ ಹೆಜ್ಜೆಯಾಗಿದೆ.
































