ಬೆಂಗಳೂರು : ಕೆಎಂಎಫ್ ದೆಹಲಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಆರಂಭಿಸಿ ಕೆಲವೇ ತಿಂಗಳುಗಳು ಕಳೆದಿದ್ದು, ಇದೀಗ ರಾಜಸ್ಥಾನ ಹಾಗೂ ಮಧ್ಯ ಪ್ರದೇಶಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಕೆಎಂಫ್ ಸಿದ್ಧತೆ ನಡೆಸಿದೆ.
ದಕ್ಷಿಣ ಭಾರತದ ವ್ಯಾಪ್ತಿ ಮೀರಿ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ಯೋಜನೆಯ ಭಾಗವಾಗಿ ಕೆಎಂಎಫ್ ರಾಜಸ್ಥಾನ ಹಾಗೂ ಮಧ್ಯ ಪ್ರದೇಶಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಚಿಂತನೆ ನಡೆಸಿದೆ.
ರಾಜಸ್ಥಾನದಲ್ಲಿ ಹಾಲು ಸಂಗ್ರಹ ಪ್ರಾರಂಭಿಸಲು ಮತ್ತು ಕೊ-ಪ್ಯಾಕೇಜಿಂಗ್ ಸೆಂಟರ್‌ಗಳನ್ನು ಸ್ಥಾಪಿಸಲು ಕೆಎಂಎಫ್ ಮುಂದಾಗಿದೆ. ಪೂರೈಕೆ ಸರಪಳಿಯನ್ನು ಬಲಪಡಿಸಲು ಮತ್ತು ಉತ್ತರ ಭಾರತದ ಮಾರುಕಟ್ಟೆಯಲ್ಲಿ ಪ್ರಭಾವ ಹೆಚ್ಚಿಸಲು ರಾಜಸ್ಥಾನ ಮಾತ್ರವಲ್ಲದೆ, ಮಧ್ಯಪ್ರದೇಶವನ್ನು ಪ್ರಮುಖ ಭಾಗವಾಗಿ ಪರಿಗಣಿಸಲಾಗುತ್ತಿದೆ. ಉತ್ತರ ಭಾಗದ ಮಾರುಕಟ್ಟೆಗಳಿಗೆ ಹತ್ತಿರದಲ್ಲಿ ಕೊ-ಪ್ಯಾಕೇಜಿಂಗ್ ಘಟಕಗಳನ್ನು ಸ್ಥಾಪಿಸುವ ಮೂಲಕ, ಹಾಲು ಮತ್ತು ಹಾಲಿನ ಉತ್ಪನ್ನಗಳ ಸಾಗಾಟ ದೂರವನ್ನು ಕಡಿಮೆ ಮಾಡುವುದು ಕೆಎಂಎಫ್ ಗುರಿಯಾಗಿದೆ ಎಂದು ಕೆಎಂಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಧ್ಯ ಪ್ರದೇಶದಲ್ಲಿ ಕೊ-ಪ್ಯಾಕೇಜಿಂಗ್ ಘಟಕಗಳನ್ನು ಸ್ಥಾಪಿಸುವ ಮೂಲಕ ಕೋಲ್ಡ್ ಸ್ಟೋರೇಜ್ ಸರಪಳಿಯ ಮೇಲಿನ ಹೊರೆಯನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ. ಪೌಷ್ಟಿಕಾಂಶ ಸಂರಕ್ಷಿಸಲು ಮತ್ತು ಹಾಳಾಗುವ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಕೊ-ಪ್ಯಾಕೇಜಿಂಗ್ ಸೆಂಟರ್‌ಗಳು ಕೆಎಂಎಫ್‌ಗೆ ಹತ್ತಿರದ ಸ್ಥಳಗಳಿಂದ ಅಥವಾ ಕರ್ನಾಟಕದಿಂದ ಹಾಲು ಅಥವಾ ಸಂಸ್ಕರಿಸಿದ ಡೈರಿ ಉತ್ಪನ್ನಗಳನ್ನು ಸ್ವೀಕರಿ ಶೇಖರಿಸಿ ಇಡಲು ಸಹಾಯ ಮಾಡುತ್ತವೆ. ಅಲ್ಲದೆ, ಮಾರುಕಟ್ಟೆಗೆ ಸನಿಹದಲ್ಲೇ ಅಂತಿಮ ಪ್ಯಾಕೇಜಿಂಗ್ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ತಾಜಾ ಉತ್ಪನ್ನಗಳು ಚಿಲ್ಲರೆ ಮಾರಾಟ ಮಳಿಗೆಗಳನ್ನು ವೇಗವಾಗಿ ತಲುಪುವಂತೆ ಮಾಡಬಹುದು ಎಂದಿದ್ದಾರೆ.