ತುಮಕೂರು : ಸಮಯ ಬಂದಾಗ ಇದೇ ಅವಧಿಯಲ್ಲಿ ಸಚಿವ ಸ್ಥಾನ ಮತ್ತೆ ಪಡೆಯುತ್ತೇನೆ. ಹೈಕಮಾಂಡ್ ಕನ್ವಿನ್ಸ್ ಆಗುತ್ತಾರೆ ಎಂಬ ವಿಶ್ವಾಸ ಇದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಸ್ಥಾನದಿಂದ ವಜಾ ಆದ ಬಳಿಕ ರಾಜಣ್ಣ ತಮ್ಮ ಸ್ವಕ್ಷೇತ್ರ ಮಧುಗಿರಿಗೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ತಾಲೂಕು ಆಡಳಿತ ನಡೆಸಿದ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಬಳಿಕ ಮಧುಗಿರಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
“ಕಳೆದ ವಾರ ಸಚಿವನಾಗಿ ಮಧುಗಿರಿಗೆ ಬಂದಿದ್ದೆ. ಈ ವಾರ ಮಾಜಿ ಸಚಿವನಾಗಿ ಬಂದಿದ್ದೇನೆ. ಇದರಲ್ಲಿ ಯಾವುದೇ ವ್ಯತ್ಯಾಸ ನನಗೆ ಕಾಣುತ್ತಿಲ್ಲ. ಜನರ ಪ್ರೀತಿ-ವಿಶ್ವಾಸ ಒಂದಿದ್ದರೆ ಸಾಕು. ನಿನ್ನೆ ರಾತ್ರಿ ಜಿ ಪರಮೇಶ್ವರ್ ಕೂಡ ನನ್ನ ಮನೆಗೆ ಬಂದು ಕುಶಲೋಪರಿ ವಿಚಾರಿಸಿ ಹೋಗಿದ್ದಾರೆ. ಅಸೆಂಬ್ಲಿ ಮುಗಿದ ಬಳಿಕ ಹೈಕಮಾಂಡ್‌ಗೆ ಭೇಟಿ ಆಗಿ ಸತ್ಯ ವಿವರಿಸುತ್ತೇನೆ. ನನಗೆ ರಾಜಕೀಯ ಏಳು-ಬೀಳು ಹೊಸತಲ್ಲ. ಸಮಯ ಬಂದಾಗ ಮತ್ತೆ ಸಚಿವನಾಗುತ್ತೇನೆ. ಹೈಕಮಾಂಡ್ ಕನ್ವಿನ್ಸ್ ಆಗುತ್ತಾರೆ ಎಂಬ ವಿಶ್ವಾಸವಿದೆ” ಎಂದು ತಿಳಿಸಿದರು.
“ಶೂ ಭಾಗ್ಯ ನನ್ನ ಮನವಿ ಮೇರೆಗೆ ಜಾರಿ ಮಾಡಿದ್ದು. ರಾಹುಲ್ ಗಾಂಧಿ ಮತಗಳ್ಳತನ ವಿರುದ್ಧ ಹೋರಾಟ ಮಾಡುತ್ತಿದ್ದರು. ಸಿಟಿಯಲ್ಲಿ ಮತಗಳ್ಳತನ ಹೆಚ್ಚಾಗುತ್ತದೆ. ಗ್ರಾಮಾಂತರದಲ್ಲಿ ಮತಗಳ್ಳತನ ಆಗಲ್ಲ. ಆರ್‌ಎಸ್‌ಎಸ್ ನವರು ಬಹಳ ಪದ್ಧತಿ ಪೂರ್ವಕವಾಗಿ ಚುನಾವಣೆ ಮಾಡುತ್ತಾರೆ. ನಮ್ಮ ಕಾರ್ಯಕರ್ತರು ಮತಗಳ್ಳತನ ಕುರಿತಂತೆ ಎಚ್ಚರಿಕೆಯಿಂದ ಇರಬೇಕು. ಮತಗಳ್ಳತನದ ವಿರುದ್ಧದ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ಅಸೆಂಬ್ಲಿ ಮುಗಿದ ಬಳಿಕ ನಾನು ಹೈಕಮಾಂಡ್‌ಗೆ ಭೇಟಿಯಾಗಿ ವಿವರಿಸುತ್ತೇನೆ. ಆಗ ನನಗೆ ನೈಜ ಕಾರಣ ಗೊತ್ತಾಗುತ್ತದೆ” ಎಂದು ಹೇಳಿದರು.
“ನನಗೆ ಯಾವ ಬೇಸರನೂ ಇಲ್ಲ. ಇಂಡಿಯಾ ಒಕ್ಕೂಟಕ್ಕೆ 20 ಸೀಟ್ ಜಾಸ್ತಿ ಪಡೆದರೆ, ಮೋದಿ ಪ್ರಧಾನಿ ಆಗುತ್ತಿರಲಿಲ್ಲ. ನನಗೆ ರಾಜಕೀಯ ಏಳು-ಬೀಳು ಹೊಸತ್ತಲ್ಲ. ಜನರ ವಿಶ್ವಾಸ, ಆಶೀರ್ವಾದ ಇರೋವರೆಗೂ ಎಂತಹ ಸಂದರ್ಭವನ್ನೂ ಎದುರಿಸಬಹುದು. ಅಧಿಕಾರ ಬಂದರೆ ಜನಪರ ಕೆಲಸ ಮಾಡುತ್ತೇನೆ. ನಾನು ಸುಳ್ಳು ಹೇಳೋನು, ಮೋಸ ಮಾಡೋನು ಅಲ್ಲ. ಸ್ವಾರ್ಥಕೋಸ್ಕರ ಸುಳ್ಳು ಹೇಳಿಲ್ಲ. ಅಧಿಕಾರ ಇಲ್ಲದೇ ಹಾಳಾಗಿ ಹೋಗಲಿ. ಜನರ ವಿಶ್ವಾಸ-ಪ್ರೀತಿ ಹೀಗೆ ಇರಲಿ ಎಂದು ಪ್ರಾರ್ಥಿಸುತ್ತೇನೆ” ಎಂದರು.