ಗುರಜರಾತ್ : ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ಪ್ರತಿಯೊಬ್ಬರ ಹಿಂದೆಯೂ ಒಂದು ಸಾಧನೆಯ ಕಥೆ ಇರುತ್ತದೆ. ಇಲ್ಲೊಬ್ಬ ಸಾಧಕಿಯ ಹಿಂದೆ ಕೇವಲ ಪರಿಶ್ರಮ ಕಥೆ ಅಲ್ಲ, ವೈಯಕ್ತಿಕ ಜೀವನವೇ ಛಿದ್ರವಾದ ಕಥೆ ಇದೆ. ಮುರಿದ ಮದುವೆಯಿಂದ ಹೊರ ಬಂದ ಯುವತಿ ಇಂದು ದೊಡ್ಡ ಅಧಿಕಾರಿಯಾಗಿರುವ ಸಕ್ಸಸ್ ಸ್ಟೋರಿ ಇಲ್ಲಿದೆ ನೋಡಿ.
ಇವರು ಗುಜರಾತಿನ ಅಮ್ರೇಲಿ ಜಿಲ್ಲೆಯ ನಿವಾಸಿ ಕೋಮಲ್ ಗಣತ್ರಾ. ಮದುವೆಯಾದ 15 ದಿನಗಳಲ್ಲೇ ಕೋಮಲ್ ಅವರ ಪತಿ ಅವರನ್ನು ತೊರೆದಿದ್ದರು. ಈ ನೋವಿನಲ್ಲು ಛಲ ಬಿಡದೆ UPSC ಪರೀಕ್ಷೆಯಲ್ಲಿ ಯಶಸ್ವಿಯಾದರು. ಕೋಮಲ್ ಗಣತ್ರ ಅವರು ಗುಜರಾತ್ ನ ಅಮ್ರೇಲಿ ಜಿಲ್ಲೆಯ ಸಾವರ್ಕುಂಡ್ಲಾ ಗ್ರಾಮದಲ್ಲಿ 1982 ರಲ್ಲಿ ಜನಿಸಿದರು. ಬಾಲ್ಯದಿಂದಲೂ ಕೋಮಲ್ ವಿದ್ಯಾಭ್ಯಾಸದಲ್ಲಿ ತುಂಬಾ ಚುರುಕಾಗಿದ್ದರು.
ಮುರಿದು ಬಿದ್ದ ಮದುವೆ ಕೋಮಲ್ ಅವರ ಸ್ವಾಭಿಮಾನವನ್ನು ಘಾಸಿಗೊಳಿಸಿತು. ಆದರೆ, ಅದಕ್ಕೆ ಎದೆಗುಂದದೆ ಕಷ್ಟಪಟ್ಟು ಓದಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಬದುಕು ಕಟ್ಟಿಕೊಂಡರು. 2008 ರಲ್ಲಿ, 26 ನೇ ವಯಸ್ಸಿನಲ್ಲಿ ಕೋಮಲ್ ನ್ಯೂಜಿಲೆಂಡ್ ನಲ್ಲಿ ವಾಸಿಸುವ ಶೈಲೇಶ್ ಎಂಬುವರನ್ನು ವಿವಾಹವಾದರು. ಮದುವೆಯಾದ ಕೇವಲ 15 ದಿನಗಳಲ್ಲಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಶೈಲೇಶ್ ನ್ಯೂಜಿಲೆಂಡ್ ಗೆ ಹೋಗಿ ಕೋಮಲ್ ಜತೆಗಿನ ಸಂಪರ್ಕ ಕಡಿದುಕೊಂಡಿದ್ದರು.
ಮದುವೆಗೂ ಮುನ್ನ ಕೋಮಲ್ ಗುಜರಾತ್ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಆದರೆ ಆಕೆಗೆ ಸಂದರ್ಶನಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಹಾಗಾಗಿಯೇ ಈ ಸರ್ಕಾರಿ ನೌಕರಿಯ ಅವಕಾಶ ಅವರ ಕೈ ತಪ್ಪಿ ಹೋಗಿತ್ತು.
ಮದುವೆ ಮುರಿದುಬಿದ್ದ ನಂತರ, ಕೋಮಲ್ ತನ್ನ ಮನೆಯಿಂದ ದೂರದ ಹಳ್ಳಿಯಲ್ಲಿ ವಾಸಿಸಲು ಪ್ರಾರಂಭಿಸಿದರು. ಆ ಸಮಯದಲ್ಲಿ ಅವರು ಶಾಲೆಯೊಂದರಲ್ಲಿ ಶಿಕ್ಷಕಿಯಾಗಿಯೂ ಕೆಲಸ ಮಾಡುತ್ತಿದ್ದರು.ಕೋಮಲ್ ಗಣತ್ರಾ ಯುಪಿಎಸ್ಸಿ ಪರೀಕ್ಷೆಗೆ 3 ಬಾರಿ ಪ್ರಯತ್ನಿಸಿ ವಿಫಲರಾಗಿದ್ದರು. 2012 ರಲ್ಲಿ, ಅವರು UPSC ಪರೀಕ್ಷೆಯಲ್ಲಿ 591 ನೇ ರ್ಯಾಂಕ್ ಪಡೆಯುವ ಮೂಲಕ IRS ಅಧಿಕಾರಿಯಾದರು.
ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಯಶಸ್ವಿಯಾದ ನಂತರ, ಕೋಮಲ್ ಗುಜರಾತ್ ಹೈಕೋರ್ಟ್ ನಲ್ಲಿ ನ್ಯಾಯಾಂಗ ಅಧಿಕಾರಿಯಾಗಿರುವ ಮೋಹಿತ್ ಶರ್ಮಾ ಅವರನ್ನು 2ನೇ ಮದುವೆಯಾದರು.