ಬೆಂಗಳೂರು : ಕೆಎಸ್ಆರ್ಟಿಸಿ ನೌಕರರಿಗೆ ಸಾರಿಗೆ ಇಲಾಖೆಯು ಹೊಸ ವರ್ಷದ ವೇಳೆಗೆ ಸಿಹಿ ಸುದ್ದಿ ನೀಡಿದ್ದು, ನೌಕರರ 20 ವರ್ಷಗಳ ಬೇಡಿಕೆಯಾಗಿದ್ದ ನಗದು ರಹಿತ ಚಿಕಿತ್ಸಾ ಯೋಜನೆಗೆ ‘ಕೆಎಸ್ಆರ್ಟಿಸಿ ಆರೋಗ್ಯ’ ಇಂದು ಚಾಲನೆ ದೊರೆತಿದೆ.
ವಿಧಾನಸೌಧದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಕೆಎಸ್ಆರ್ಟಿಸಿ ಆರೋಗ್ಯ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಈ ಯೋಜನೆ ಅಡಿಯಲ್ಲಿ ನೌಕರನ ಕುಟುಂಬದಲ್ಲಿ ತಂದೆ-ತಾಯಿ, ಹೆಂಡತಿ ಮಕ್ಕಳು ಎಲ್ಲರಿಗೂ ಚಿಕಿತ್ಸೆ ಸಿಗಲಿದೆ. ಯಾವುದೇ ಕಾಯಿಲೆ ಮತ್ತು ಎಷ್ಟೇ ಖರ್ಚಾದರೂ ಈ ಯೋಜನೆ ಅಡಿ ಚಿಕಿತ್ಸೆ ಲಭಿಸಲಿದೆ. ನೌಕರರು ಪ್ರತಿ ತಿಂಗಳು 650ರಂತೆ ವಾರ್ಷಿಕ 8 ಸಾವಿರ ರೂ. ಕಟ್ಟಬೇಕು. ಈ ಯೋಜನೆ ಅಡಿ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. 250 ಆಸ್ಪತ್ರೆಗಳು 24 ಡಯಾಗ್ನಸ್ಟಿಕ್ ಸೆಂಟರ್, 6 ಆಯುರ್ವೇದ ಆಸ್ಪತ್ರೆಗಳು ಈ ಯೋಜನೆ ಅಡಿ ಸರ್ಕಾರ ಎಮ್ಒಯು ಮಾಡಿಕೊಂಡಿದೆ.
ಯೋಜನೆ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಇದೊಂದು ಉತ್ತಮ ಕಾರ್ಯಕ್ರಮ. ಬಹಳ ದಿನದಿಂದ ಇದರ ಬೇಡಿಕೆ ಇತ್ತು. ಇಂದು ಜಾರಿ ಮಾಡಿದ್ದೇವೆ. ನೌಕರರು ಮತ್ತು ಅವರ ಕುಟುಂಬಗಳಿಗೂ ಅನ್ವಯ ಆಗಲಿದೆ, ಉಪಯೋಗ ಆಗಲಿದೆ. ಎಲ್ಲಿ ಬೇಕಾದರೂ ಚಿಕಿತ್ಸೆ ಪಡೆಯಬಹುದು. ಕಾರ್ಡ್ ತೋರಿಸಿದರೆ ಚಿಕಿತ್ಸೆ ಕೊಡುತ್ತಾರೆ. ಏನೇ ಕಾಯಿಲೆ ಇದ್ದರೂ ಚಿಕಿತ್ಸೆ ಸಿಗಲಿದೆ ಎಂದು ಮಾಹಿತಿ ನೀಡಿದರು.
ಯಾವುದೇ ಕಾರಣಕ್ಕೂ ತಿರಸ್ಕಾರದಿಂದ ನೌಕರರನ್ನು ನೋಡಬೇಡಿ. ಆಸ್ಪತ್ರೆಗಳಿಗೆ ನೌಕರರು ಬಂದ ಕೂಡಲೇ ಚಿಕಿತ್ಸೆ ಕೊಡಬೇಕು. ಹಣ ಕೊಡುವವರಿಗೆ ಹೇಗೆ ಚಿಕಿತ್ಸೆ ಕೊಡುತ್ತೀರೋ ನೌಕರರಿಗೂ ಚಿಕಿತ್ಸೆ ಕೊಡಬೇಕು ಎಂದು ನೊಂದಾಯಿತ ಆಸ್ಪತ್ರೆಗಳಿಗೆ ತಾಕೀತು ಮಾಡಿದರು.
250 ಆಸ್ಪತ್ರೆಗಳ ಜೊತೆ ಒಡಂಬಡಿಕೆ ಆಗಿದೆ. ಮುಂದೆ ಇನ್ನು ಜಾಸ್ತಿ ಆಸ್ಪತ್ರೆ ಆಗಲಿದೆ. ಇಂದು ಕೆಎಸ್ಆರ್ಟಿಸಿಗೆ ಆಗಿದೆ. ಉಳಿದ 3 ನಿಗಮಗಳಿಗೆ ಯೋಜನೆ ಜಾರಿ ಮಾಡುತ್ತೇವೆ. 3 ತಿಂಗಳಲ್ಲಿ 3 ನಿಗಮಗಳಲ್ಲಿ ಯೋಜನೆ ಜಾರಿ ಆಗಲಿದೆ ಎಂದರು.