ಚಿತ್ರದುರ್ಗ: ಸಾಧನೆಗೆ ಅಂಗವಿಕಲತೆ ಅಡ್ಡಿ ಬರುವುದಿಲ್ಲ ಎನ್ನುವುದಕ್ಕೆ ಕು ಶ್ರೀಚಿತ್ರ ಆರ್ರವರು ಉದಾಹರಣೆಯಾಗಿದ್ದಾರೆ. ಇಂದಿನ ದಿನಮಾನದಲ್ಲಿ ದೇಹದ ಎಲ್ಲಾ ಅಂಗಳು ಸರಿಯಿದ್ದರು ಸಹಾ ಸಾಧನೆ ಮಾಡಲು ಮುಂದೆ ಬಾರದ ಜನತೆಗೆ ಶ್ರೀಚಿತ್ರ ಮಾದರಿಯಾಗಿದ್ದಾಳೆ, ಬೇರೆಯವರಿಗೆ ಸ್ಪೂರ್ತಿಯಾಗಿದ್ದಾಳೆ.
ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿನ ನೆಹರು ನಗರದಲ್ಲಿ ವಾಸವಾಗಿರುವ ರಮೇಶ್ ಸಿ. ಮತ್ತು ಶ್ರೀಮತಿ ಸಿ.ಆರ್. ವಿಜಯರವರ ಪುತ್ರಿ ಕು|| ಶ್ರೀಚಿತ್ರ ಆರ್. ಆಲಿಸುವ ಮತ್ತು ಮಾತನಾಡುವ ಸಾಮಥ್ರ್ಯವಿಲ್ಲದಿದ್ದರೂ ತನ್ನ ಅಚಲ ಮನೋಬಲ, ಧೈರ್ಯ ಹಾಗೂ ಪರಿಶ್ರಮದ ಮೂಲಕ ನೃತ್ಯ ಕಲೆಯ ಅಂತರಂಗವನ್ನು ಆರಿತು ಅದರಲ್ಲಿ ನಿಪುಣತೆ ಸಾಧಿಸುತ್ತಿದ್ದಾಳೆ. ಕುಃ ಶ್ರೀಚಿತ್ರ ಆರ್. 10ನೇ ತರಗತಿಯವರೆಗೆ ಚಿತ್ರದುರ್ಗದ ಜ್ಞಾನವಿಕಾಸ ವಿದ್ಯಾಸಂಸ್ಥೆಯಲ್ಲಿ ಓದಿದ್ದು, ಪ್ರಸ್ತುತ ಚೈತನ್ಯ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ಓದುತ್ತಿದ್ದಾಳೆ. ಈ ನಡುವೆಯೇ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಜ್ಯೂನಿಯರ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಗೊಂಡಿದ್ದು, ನೃತ್ಯವನ್ನು ಜೀವನದ ಭಾಗವನ್ನಾಗಿ ಮಾಡಿಕೊಂಡು ಸಂಸ್ಕೃತಿಯ ಮೌಲ್ಯಗಳನ್ನು ಜೀವಂತವಾಗಿಟ್ಟು ಕೊಂಡಿದ್ದಾಳೆ.
ನೃತ್ಯ ಕಲಾವಿದೆ ವಿದುಷಿ ಗುರು ಶ್ರೀಮತಿ ಶ್ವೇತಾ ಮಂಜುನಾಥ್ ಪ್ರೀತಿಯ ಶಿಷ್ಯ ನಯ-ವಿನಯ, ಸರಳ, ಸೌಜನ್ಯಯುತ ನಡವಳಿಕೆಯ ಕು ಶ್ರೀಚಿತ್ರ ಆರ್. ಭರತನಾಟ್ಯ ಕಲೆಯತ್ತ ಅಪಾರ ಆಸಕ್ತಿ ಹೊಂದಿದ್ದು ಅವರ ಪ್ರೇರಣೆ, ಸಹನೆ ಹಾಗೂ ನಿಷ್ಠಾವಂತ ಮಾರ್ಗದರ್ಶನದ ಅಡಿಯಲ್ಲಿ ಹಲವು ವರ್ಷಗಳಿಂದ ಭರತನಾಟ್ಯ ನೃತ್ಯಾಭ್ಯಾಸ ಮುಂದುವರೆಸಿದ್ದಾಳೆ. ಚಿತ್ರದುರ್ಗದ ಪ್ರತಿಷ್ಠಿತ ನಾಟ್ಯ ಸಂಸ್ಥೆಯಾದ ಲಾಸಿಕಾ ಫೌಂಡೇಶನ್ ಕಲಾತಂಡದೊಂದಿಗೆ ಹಲವಾರು ವೇದಿಕೆಗಳಲ್ಲಿ ನೃತ್ಯ ಕಾರ್ಯಕ್ರಮ ನೀಡಿ ಕಲಾರಸಿಕರ ಪ್ರಶಂಸೆಗೆ ಪಾತ್ರಳಾಗಿ ರುತ್ತಾಳೆ. ಇದೀಗ ನಾಟ್ಯ ಶಾಸ್ತ್ರದ ಸಂಪ್ರದಾಯದಂತೆ ಗುರು-ಹಿರಿಯರ ಸಮ್ಮುಖದಲ್ಲಿ ಭರತನಾಟ್ಯ ರಂಗ ಪ್ರವೇಶದ ಮುಖಾಂತರ ಗುರುವಂದನಾಪೂರ್ವಕ ಕಲಾರಾಧನೆಗೆ ಅಣಿಗೊಳ್ಳುತ್ತಿರುವ ಕುಃ ಶ್ರೀಚಿತ್ರ ಆರ್.ರವರ ಕಲಾ ಭವಿಷ್ಯಕ್ಕೆ ಈ ಕಾರ್ಯಕ್ರಮ ಮಹತ್ವದ ಮೈಲಿಗಲ್ಲಾಗಲಿದೆ.
ಈ ರಂಗಪ್ರವೇಶವು ಅವಳ ಪರಿಶ್ರಮ, ತ್ಯಾಗ ಮತ್ತು ಕನಸನ್ನು ಸಾಕಾರಗೊಳಿಸುವ ಕ್ಷಣವಾಗಿದ್ದು, ಗುರು-ಶಿಷ್ಯರ ಬಾಂಧವ್ಯಕ್ಕೆ ಗೌರವ ಸಲ್ಲಿಸುವ ಅಪೂರ್ವ ನೃತ್ಯ ಸಂಜೆಯಾಗಲಿದೆ. ನ. 16ರ ಭಾನುವಾರ ಸಂಜೆ 6:30ಕ್ಕೆ ಜಿ.ಜಿ. ಸಮುದಾಯ ಭವನದಲ್ಲಿ ಭರತನಾಟ್ಯ ರಂಗಪ್ರವೇಶ ನಡೆಯಲಿದೆ. ಗುರು ಶ್ವೇತಾ ಭಟ್ ಅವರ ಮಾರ್ಗದರ್ಶನದಲ್ಲಿ ಸಾಧಿಸಿದ ಈ ಪಯಣ “ಅಂಗವೈಕಲ್ಯ ಅಡಚಣೆ ಅಲ್ಲ ಕಲೆ ಮನದ ಶಕ್ತಿ” ಎಂಬ ಸಂದೇಶವನ್ನು ಹೊತ್ತಿದೆ.
ಗುರುವಂದನಾ ಕಾರ್ಯಕ್ರಮದಲ್ಲಿ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ, ಚೈತನ್ಯ ಪಿ.ಯು. ಡಿಗ್ರಿ ಕಾಲೇಜಿನ ಎಸ್.ಎಂ. ಮಧು, ಶ್ರೀ ಹರಿ ವಿಜುಕೇಷನ್ ಟ್ರಸ್ಟ್ನ ನಿರ್ದೇಶಕ ಶ್ರೀಮತಿ ರಕ್ಷಾ ಮಧು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ|| ಬಿ.ಎಂ. ಗುರುನಾಥ, ಭರತನಾಟ್ಯ ಮತ್ತು ಕೂಚಿಪುಡಿ ಕಲಾವಿದೆ ವಿದುಷಿ ಶ್ರೀಮತಿ ಶ್ವೇತಾ ಮಂಜುನಾಥ್ ಭಾಗವಹಿಸಲಿದ್ದಾರೆ.
ರಂಗ ಪ್ರವೇಶದಲ್ಲಿ ಹಾಡುಗಾರಿಕೆ ವಿದ್ವಾನ್ ರೋಹಿತ್ ಭಟ್, ಬೆಂಗಳೂರು, ಮೃದಂಗ ವಿದ್ವಾನ್ ನಾಗೇಂದ್ರ ಪ್ರಸಾದ್, ಬೆಂಗಳೂರು ಕೊಳಲು ವಿದ್ವಾನ್ ಶಶಾಂಕ್ ಜೋಡಿದಾರ್, ಬೆಂಗಳೂರು ಪೀಟಿಲು ವಿದ್ವಾನ್ ವಿಭುದೇಂದ್ರ ಸಿಂಗ್, ಬೆಂಗಳೂರು ವಿದ್ವಾನ್ ರಿದಂ ಪ್ಯಾಡ್ ಸಾಯಿ ವಂಶಿ, ಬೆಂಗಳೂರು ಇವರು ನುಡಿಸಲಿದ್ದಾರೆ.
ಶ್ರೀಮತಿ ಶ್ವೇತಾ ಮಂಜುನಾಥರವರು ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯಶೈಲಿಗಳಲ್ಲಿ ಪರಿಣಿತಿ ಪಡೆದಿರುವ ನಮ್ಮ ನಾಡಿನ ಭರವಸೆಯ ನೃತ್ಯ ಕಲಾವಿದೆ ಮತ್ತು ಓರ್ವ ಸಮರ್ಥ ನೃತ್ಯ ನಿರ್ದೇಶಕಿ, ತಮ್ಮಲ್ಲಿರುವ ನೃತ್ಯ ಕಲೆಯನ್ನು ತನ್ನ ಶಿಷ್ಯಂದಿರಿಗೆ, ಮುಂದಿನ ಪೀಳಿಗೆಗೆ ಹಸ್ತಾಂತರಿಸುತ್ತಿರುವ ಜವಾಬ್ದಾರಿಯುತ ನೃತ್ಯ ಗುರು. ವಿದುಷಿ ಶ್ವೇತಾ, ತಂಜಾವೂರು ಶೈಲಿಯ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದ ಭರತನಾಟ್ಯ ಮತ್ತು ಕಥಕ್ ನೃತ್ಯ ಕಲಾವಿದೆ ವಿದುಷಿ ಶ್ರೀಮತಿ ಶ್ವೇತಾ ಮಂಜುನಾಥ್ ಶೈಕ್ಷಣಿಕವಾಗಿ ಬಿ.ಇಡಿ., ಎಂ.ಎ., ಪದವೀಧರೆಯಾದ ಶ್ವೇತಾ ನೃತ್ಯದಲ್ಲಿ ವಿದ್ವತ್ ಪದವಿ ಪಡೆದಿರುತ್ತಾರೆ. ವೃತ್ತಿಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿದ್ದು ಪ್ರವೃತ್ತಿಯಲ್ಲಿ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಕಲಾವಿದೆ. 2004ರಲ್ಲಿ ಜರುಗಿದ ರಾಷ್ಟ್ರ ಮಟ್ಟದ ರಾಷ್ಟ್ರೀಯ ಯುವ ಉತ್ಸವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಕೂಚಿಪುಡಿ ನೃತ್ಯದಲ್ಲಿ ವಿಜೇತರಾಗಿರುತ್ತಾರೆ.
ಹಾಗೂ ರಾಷ್ಟ್ರಮಟ್ಟದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಹಿರಿಮೆ ಇವರದ್ದಾಗಿದೆ. ತಮ್ಮ ವಿದ್ಯಾರ್ಥಿಗಳಿಗೆ ರಂಗಪ್ರವೇಶದ ಮಹತ್ವಗಳನ್ನು ತಿಳಿಸಿ, ಅನೇಕ ಯಶಸ್ವಿ ರಂಗಪ್ರವೇಶಗಳನ್ನು ಮಾಡಿಸಿರುತ್ತಾರೆ. ಕದಂಬೋತ್ಸವ, ನವರಸಪುರ ಉತ್ಸವ, ದೆಹಲಿಯಲ್ಲಿ ನಡೆದ ಬಸವ ಜಯಂತಿ ಉತ್ಸವ, ಕರಾವಳಿ ಉತ್ಸವ, ದೂರದರ್ಶನ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ, ದುರ್ಗೋತ್ಸವ ಹೀಗೆ ಅನೇಕ ಬೃಹತ್ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿ ಜನಮನ್ನಣೆಗಳಿಸಿರುತ್ತಾರೆ. ನಾಟ್ಯ ಮಯೂರಿ, ನಾಟ್ಯಕಲಾನಿಧಿ, ನೃತ್ಯಪರಂ, ನೃತ್ಯ ಸರಸ್ವತಿ ಹಾಗೂ 2022ರ ಪ್ರಜಾವಾಣಿಯ ವರ್ಷದ ಸಾಧಕಿ ಪ್ರಶಸ್ತಿ ಮತ್ತು ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. “ಸಂಸ್ಕೃತಿಯೇ ಸಂಜೀವಿನಿ” ತತ್ವದಡಿಯಲ್ಲಿ ತಮ್ಮಲ್ಲಿರುವ ನೃತ್ಯ ಜ್ಞಾನವನ್ನು ಅನೇಕ ಶಿಷ್ಯಂದಿರಿಗೆ ಧಾರೆಯೆರೆಯುವುದರ ಮೂಲಕ ಕಳೆದ 29 ವರ್ಷಗಳಿಂದ ನೃತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ.
ಸಂಸ್ಕೃತಿ ಯೇ ಸಂಜೀವಿನಿ ಎಂಬ ಧೈಯದೊಂದಿಗೆ ಪ್ರಾರಂಭವಾದ ‘ಲಾಸಿಕಾ ಫೌಂಡೇಶನ್’ ನಾಡಿನಾದ್ಯಂತ ನೃತ್ಯ ಕಲೆಯ ಕುರಿತು ಅರಿವು ಮೂಡಿಸುತ್ತಿದೆ. ಕಲಾಸಕ್ತರಿಗೆ ನಿರಂತರ ನೃತ್ಯಬೋಧನೆಯ ಜೊತೆಗೆ ಪ್ರತಿಭಾನ್ವಿತರಿಗೆ ಅವಕಾಶ ಮಾಡಿಕೊಡವುದರ ಮೂಲಕ ಅವರಲ್ಲಿನ ಪ್ರತಿಭಾ ವಿಕಸನಕ್ಕೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ.
ಈ ನಿಟ್ಟಿನಲ್ಲಿ ಅನೇಕ ಪ್ರತಿಭಾನ್ವಿತ ಕಲಾವಿದರನ್ನು ನೀಡುವಲ್ಲಿ ಸಂಸ್ಥೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ಇಂದಿನ ಪೀಳಿಗೆಗೆ ಭಾರತೀಯ ಸಂಸ್ಕೃತಿ, ಕಲೆಗಳ ಕುರಿತು ಅರಿವು ಮೂಡಿಸುತ್ತಾ ಆಧುನಿಕತೆಯಲ್ಲಿ ಶಾಸ್ತ್ರೀಯತೆಯ ಸ್ಪರ್ಶವನ್ನು ನೀಡುತ್ತಾ ಬಂದಿದ್ದು ನಮ್ಮ ಕಲಾ ಪರಂಪರೆಯನ್ನು ಬೆಳೆಸುವಲ್ಲಿ ಅಹರ್ನಿಶಿ ದುಡಿಯುತ್ತ ಬಂದಿದೆ.































