ಮೈಸೂರು: ಅತ್ತ ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕುಂಭಮೇಳದ ಪವಿತ್ರ ಸ್ನಾನ ನಡೆಯುತ್ತಿದ್ದರೆ ಇತ್ತ ಪವಿತ್ರಕ್ಷೇತ್ರವೆಂದೇ ಹೆಸರುವಾಸಿಯಾಗಿರುವ ಮೈಸೂರು ಜಿಲ್ಲೆಯ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕುಂಭಮೇಳಕ್ಕೆ ಸರ್ವಸಿದ್ಧತೆಗಳು ನಡೆಯುತ್ತಿದ್ದು, ಭಕ್ತರಿಗೆ ಫೆ.10ರಿಂದ 12ರವರೆಗೆ ಮೂರು ದಿನಗಳ ಕಾಲ ಪವಿತ್ರ ತೀರ್ಥದಲ್ಲಿ ಸ್ನಾನ ಮಾಡಲು ಹಾತೊರೆಯುತ್ತಿದ್ದಾರೆ.
ತಲಕಾವೇರಿಯಲ್ಲಿ ಜನ್ಮತಾಳಿ ಭಾಗಮಂಡಲದಲ್ಲಿ ತ್ರಿವೇಣಿ ಸಂಗಮವನ್ನು ಸೃಷ್ಟಿಸಿ ಹರಿಯುವ ಕಾವೇರಿ ತಾನು ಹರಿದ ಕಡೆಗಳಲ್ಲೆಲ್ಲ ಪವಿತ್ರ ಕ್ಷೇತ್ರಗಳನ್ನುನ ಸೃಷ್ಟಿಸಿದ್ದು ಅದರಲ್ಲಿ ತಿರುಮಕೂಡಲು ಒಂದಾಗಿದೆ.
ಸ್ನಾನಘಟ್ಟ ನಿರ್ಮಾಣ..ಬೋಟ್ ವ್ಯವಸ್ಥೆ ಅದರಂತೆ ಅಗಸ್ತೇಶ್ವರ, ಗುಂಜಾ ನರಸಿಂಹ ಸ್ವಾಮಿ ಮತ್ತು ಭಿಕ್ಷೇಶ್ವರ ಸ್ವಾಮಿ ದೇವಾಲಯದ ಬಳಿ ಸ್ನಾನ ಘಟ್ಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಇದೀಗ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವ ಕಾರಣ ಮತ್ತು ನದಿ ಆರು ಅಡಿಯಷ್ಟು ಆಳವಿರುವುದರಿಂದ ವೃದ್ಧರು ಮತ್ತು ಮಕ್ಕಳು ಮುಳುಗದಂತೆ ಕ್ರಮ ವಹಿಸಲಾಗುತ್ತಿದೆ. ಸ್ನಾನ ಮಾಡುವವರು ಮೂರು ಅಡಿ ಆಳದವರೆಗೆ ಹೋಗಿ ಸ್ನಾನ ಮಾಡಲು ಅವಕಾಶವಿದ್ದು, ಮೂರು ಅಡಿ ಆಳದ ನಂತರ ಬ್ಯಾರಿಕೇಡ್ ನಿರ್ಮಾಣ ಮಾಡಿ, ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.
ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಈ ಬಾರಿ ತೇಲುವ ಸೇತುವೆ ನಿರ್ಮಾಣ ಮಾಡುತ್ತಿಲ್ಲ. ಜತೆಗೆ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ 15ಕ್ಕೂ ಹೆಚ್ಚು ಬೋಟ್ ನಿಯೋಜಿಸಲು ವ್ಯವಸ್ಥೆ ಮಾಡಿದೆ. ರಂಗನತಿಟ್ಟು ಪಕ್ಷಿಧಾಮದಿಂದ 2, ಸ್ಥಳೀಯವಾಗಿ 12, ರೆಸಾರ್ಟ್ಗಳಿಂದ 4 ಬೋಟ್ ಗಳನ್ನು ಪಡೆದುಕೊಳ್ಳಲಾಗಿದೆ. ಜತೆಗೆ ಈಜು ತಜ್ಞರನ್ನು ಸಜ್ಜುಗೊಳಿಸಲಾಗುತ್ತಿದೆ. ಪವಿತ್ರ ಸ್ನಾನ ಮಾಡುವ ಸಲುವಾಗಿ ಲಕ್ಷಾಂತರ ಭಕ್ತರು ಒಮ್ಮೆಗೆ ಆಗಮಿಸುವುದರಿಂದ ಕಾಲ್ತುಳಿತ ಉಂಟಾಗದಂತೆ ಪ್ರತ್ಯೇಕವಾಗಿ ಪ್ರವೇಶ ಮತ್ತು ನಿರ್ಗಮನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಗಂಗಾರತಿ ಮಾದರಿಯಲ್ಲಿ ಮಹಾಆರತಿ ಹಾಗೆಯೇ ಸಂಚಾರ ದಟ್ಟಣೆ ಹೆಚ್ಚಾಗದಂತೆ ತ್ರಿವೇಣಿ ಸಂಗಮದ ಬಳಿ ವಾಹನ ಸಂಚಾರ ನಿಷೇಧಿಸಿದ್ದು, ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕುಂಭಮೇಳದಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಒತ್ತು ನೀಡಲಾಗಿದೆ. ಅದಕ್ಕಾಗಿ ಸಂಗಮ ಸ್ಥಳದ ಮೂರು ಕಡೆ ವೇದಿಕೆ ನಿರ್ಮಾಣ ಮಾಡಲಾಗಿದೆ. ಮೂರು ದಿನಗಳ ಕಾಲವೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಇದರೊಂದಿಗೆ ಬೆಳ್ಳಿ ರಥದ ಮೂಲಕ ಸಂತರ, ಮಠಾಧೀಶರ ಮೆರವಣಿಗೆ ಇರಲಿದೆ.
ಇದರ ಜತೆಗೆ ಸಂಕಲ್ಪ ಹೋಮ, ಅಗಸ್ತೇಶ್ವರನಿಗೆ ರುದ್ರಾಭಿಷೇಕ, ಅನುಜ್ಞೆ ಧ್ವಜಾರೋಹಣ, ಹೋಮ ಹವನ ಸೇರಿ ಅನೇಕ ಧಾರ್ಮಿಕ ಕಾರ್ಯ ನೆರವೇರಲಿವೆ. ಕುಂಭಮೇಳದ ಎರಡನೇ ದಿನವಾದ ಮಂಗಳವಾರ(ಫೆ.11) ರಾತ್ರಿ ತ್ರಿವೇಣಿ ಸಂಗಮದಲ್ಲಿ ಕಾಶಿಯಲ್ಲಿ ಗಂಗಾನದಿಗೆ ನಡೆಯುವ ಗಂಗಾರತಿ ಮಾದರಿಯಲ್ಲಿ ಮಹಾ ಆರತಿ ನಡೆಯಲಿದೆ. ಇದಕ್ಕಾಗಿ ಕಾಶಿಯಿಂದ 15ಮಂದಿಯನ್ನು ಕರೆಸಿಕೊಳ್ಳಲಾಗುತ್ತಿದ್ದು ಪ್ರತ್ಯೇಕ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ.
ಫೆ.10ರಿಂದ ಧಾರ್ಮಿಕ ಕೈಂಕರ್ಯದ ಜೊತೆ ಪವಿತ್ರಸ್ನಾನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು, ಭದ್ರತೆಗೆ ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕುಂಭಮೇಳದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮೂರು ದಿನ ದೀಪಾಲಂಕಾರದ ವ್ಯವಸ್ಥೆ ಮಾಡಲಾಗುತ್ತಿದೆ. ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದ್ದು, 3 ಕಡೆ ಇರುವ ಸ್ನಾನ ಘಟ್ಟಗಳಲ್ಲಿ 20 ಬಟ್ಟೆ ಬದಲಿಸಲು ತಾತ್ಕಾಲಿಕ ಕೊಠಡಿ ನಿರ್ಮಾಣ ಮತ್ತು ಪ್ರತಿ ಸ್ನಾನ ಘಟ್ಟದ ಬಳಿ 10 ಶೌಚಾಲಯ ನಿರ್ಮಿಸಲಾಗುತ್ತಿದೆ.
ಕುಂಭಮೇಳದ ಅಂಗವಾಗಿ ಏನೆಲ್ಲ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ ಎನ್ನುವುದನ್ನು ನೋಡಿದ್ದೇ ಆದರೆ ಫೆ.10ರಂದು ಬೆಳಗ್ಗೆ 9 ಗಂಟೆಗೆ ಮಾಘ ಶುದ್ಧ ತ್ರಯೋದಶೀ ಪುಷ್ಯ ನಕ್ಷತ್ರ ಶ್ರೀ ಅಗಸ್ಥೇಶ್ವರ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಕಲಶ ಸ್ಥಾಪನೆ, ಗಣಹೋಮ, ಅಭಿಷೇಕ, ದೇವತಾರಾಧನೆ, ಅಗ್ರಸ್ತ್ಯರ ಸಂಗ್ರಹ ಸಮೇತ ಯಾಗಶಾಲಾ ಪ್ರವೇಶ, ಪುಣ್ಯಾಹ, ವಾಸ್ತುಹೋಮಗಳು ನಡೆಯಲಿವೆ. ಅಂದು ಸಂಜೆ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಧ್ವಜಾರೋಹಣ ನಡೆಯಲಿದೆ.
ಕುಂಭಮೇಳದಲ್ಲಿ ಸ್ವಾಮೀಜಿಗಳ ಭವ್ಯ ಮೆರವಣಿಗೆ ಫೆ.11ರಂದು ಬೆಳಗ್ಗೆ 6ಕ್ಕೆ ಮಾಘಶುದ್ಧ ಚತುರ್ದಶಿ ಆಶ್ಲೇಷ ನಕ್ಷತ್ರ, ಪುಣ್ಯಾಹ, ನವಗ್ರಹಪೂಜೆ, ಜಪ, ನವಗ್ರಹ ಹೋಮ, ಪುರ್ಣಾಹುತಿ. ಬೆ.11ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಸಂಜೆ 6ಕ್ಕೆ ಸುದರ್ಶನ ಪೂಜೆ, ಹೋಮ, ಪುರ್ಣಾಹುತಿ ನಡೆಯಲಿದೆ. ಸಂಜೆ 4ಗಂಟೆಗೆ ಗುಂಜಾ ನರಸಿಂಹಸ್ವಾಮಿ ದೇವಸ್ಥಾನ, ವಿಶ್ವಕರ್ಮ ಬೀದಿ, ಭಗವಾನ್ ಟಾಕೀಸ್ ವೃತ್ತ, ಲಿಂಕ್ ರಸ್ತೆ, ಬಸ್ ನಿಲ್ದಾಣದ ಮೂಲಕ ತ್ರಿವೇಣಿ ಸಂಗಮಕ್ಕೆ ಮಂಗಳವಾದ್ಯ, ಕಲಾತಂಡ, ಸ್ತಬ್ಧ ಚಿತ್ರಗಳೊಂದಿಗೆ ಸ್ವಾಮೀಜಿಗಳ ಭವ್ಯ ಮೆರವಣಿಗೆ ಸಂಜೆ 7ಕ್ಕೆ ವಾರಣಾಸಿ ಮಾದರಿಯಲ್ಲಿ ದೀಪಾರತಿ ಕಾರ್ಯಕ್ರಮ ಇರಲಿದೆ.
ಫೆ.12ರ ಮುಂಜಾನೆ 5.30ಕ್ಕೆ ಮಾಘಶುದ್ಧ ವ್ಯಾಸ ಪೂರ್ಣಿಮಾ ಮಖಾನಕ್ಷತ್ರ, ಚಂಡಿಹೋಮ, ಪುಷ್ಯನಕ್ಷತ್ರ, ಪುಣ್ಯಾಹ, ಸಪ್ತನದೀತರಥ ಕಲಶ ಪೂಜೆ, ಹೋಮ, ಕುಂಭಲಗ್ನದಲ್ಲಿ ಪುರ್ಣಾಹುತಿ, ಕುಂಭೋಧ್ವಾಸನ ಹಾಗೂ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿ ಸಂಗಮದಲ್ಲಿ ಸಂಯೋಜನೆ, ಪುಣ್ಯ ಸ್ನಾನ ಹಾಗೂ ಧಾರ್ಮಿಕ ಸಭೆ ಮಾಡಲಾಗುವುದು. ಪ್ರಾತಃಕಾಲ 9.35ರಿಂದ 9.50ರ ಮೀನಲಗ್ನ, ಬೆಳಗ್ಗೆ 11.30ರಿಂದ 12ಗಂಟೆಯ ವೃಷಭ ಲಗ್ನ, ಅಭಿಜಿನ್ ಮುಹೂರ್ತ, ವಿಧಿ ಮುಹೂರ್ತ ಹಾಗೂ ವೇದ ಮುಹೂರ್ತಗಳಲ್ಲಿ ಮಹೋದಯ ಪುಣ್ಯಸ್ನಾನ ನಡೆಯಲಿದೆ.
 
				 
         
         
         
															 
                     
                     
                     
                     
                    


































 
    
    
        