ಚಿಕ್ಕಮಗಳೂರು : ಸ್ವಂತ ಕಾರಿಗೆ ಪೊಲೀಸ್ ಎಂದು ಬೋರ್ಡ್ ಹಾಕಿಕೊಂಡು ಫ್ಯಾಮಿಲಿ ಜೊತೆ ಪ್ರವಾಸ ಹೊರಟಿದ್ದ ಪೊಲೀಸಪ್ಪನಿಗೆ ದಂಡ ವಿಧಿಸುವ ಮೂಲಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರೇಣುಕಾ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಧಾರವಾಡ ಮೂಲದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸ್ವಂತ ಕಾರಿನಲ್ಲಿ ಧರ್ಮಸ್ಥಳಕ್ಕೆ ಪ್ರವಾಸ ಹೊರಟಿದ್ದರು. ಪ್ರವಾಸದ ವೇಳೆ ಟ್ರಾಫಿಕ್ ಕಿರಿಕಿರಿ ತಪ್ಪಿಸಲೋ, ಅಧಿಕಾರ ತೋರಿಸಲೋ ತಮ್ಮ ಖಾಸಗಿ ಕಾರಿನ ಮೇಲೆ ‘ಪೊಲೀಸ್’ ಎಂಬ ನಾಮಫಲಕವನ್ನು ಅಳವಡಿಸಿಕೊಂಡಿದ್ದರು. ಕೊಟ್ಟಿಗೆಹಾರ ಚೆಕ್ ಪೋಸ್ಟ್ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಬಣಕಲ್ ಪಿಎಸೈ ರೇಣುಕಾ ಅವರು ಈ ಕಾರನ್ನು ತಡೆದು ನಿಲ್ಲಿಸಿದ್ದಾರೆ.
ಈ ವೇಳೆ ಕಾರಿನಲ್ಲಿದ್ದವರು ತಾವು ಪೊಲೀಸ್ ಇಲಾಖೆಯವರು ಎಂದು ಹೇಳಿ ತಮ್ಮ ಗುರುತಿನ ಚೀಟಿಯನ್ನು ತೋರಿಸಿದ್ದಾರೆ. ಆದರೆ, ಖಾಸಗಿ ವಾಹನದ ಮೇಲೆ ಇಲಾಖೆಯ ಬೋರ್ಡ್ ಹಾಕುವುದು ನಿಯಮಬಾಹಿರ ಎಂದು ಪಿಎಸೈ ರೇಣುಕಾ ಅವರು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

































