ಬೆಳಗಾವಿ : ರಾಜ್ಯದಲ್ಲಿನ ದೇವದಾಸಿ ಮಹಿಳೆಯರಿಗೆ ಕೂಡಾ ಗೃಹ ಲಕ್ಷ್ಮೀ ಯೋಜನೆಯ ನೆರವು ದೊರೆಯುತ್ತಿದ್ದು, ಸೌಲಭ್ಯ ದೊರೆಯದ ಬಗ್ಗೆ ಯಾವುದೇ ದೂರು ಸಲ್ಲಿಕೆಯಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಹೇಳಿದರು.
ಅವರು ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯೆ ಹೇಮಲತಾ ನಾಯಕ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ ದೇವದಾಸಿ ಮಹಿಳೆಯರಿಗೆ ಮಾಸಾಶನ ಯೋಜನೆಯಡಿಯಲ್ಲಿ ಪ್ರತೀ ತಿಂಗಳು ರೂ.2000 ,ಆರ್ಥಿಕ ಸಹಾಯ ಯೋಜನೆಯಡಿ ರೂ.30000 ಗಳ ಸಹಾಯಧನ ಹಾಗೂ ಮಾಜಿ ದೇವದಾಸಿ ವಸತಿ ಯೋಜನೆಯಡಿ ವಸತಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ 6018 ದೇವದಾಸಿ ಮಹಿಳೆಯರನ್ನು ಸಮೀಕ್ಷೆ ಯಲ್ಲಿ ಗುರುತಿಸಿದ್ದು 2653 ಮಂದಿ ಜೀವಂತವಿದ್ದಾರೆ. ಜಿಲ್ಲೆಗೆ ಸಂಬಂಧಿಸಿದಂತೆ ಮತ್ತೋಮ್ಮೆಸಮೀಕ್ಷೆ ನಡೆಸಿ ಅರ್ಹರನ್ನು ಗುರುತಿಸಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದ ಸಚಿವರು ಅನಿಷ್ಟ ಪದ್ಧತಿಯಾದ ದೇವದಾಸಿ ಪದ್ಧತಿಯನ್ನು ಬೇರು ಸಮೇತ ಕಿತ್ತೊಗೆಯಲು ಪ್ರಯತ್ನಿಸಲಾಗುತ್ತಿದೆ ಎಂದರು.