ಬೆಂಗಳೂರು: ದುನಿಯಾ ವಿಜಯ್, ರಚಿತಾರಾಮ್ ಅಭಿನಯದ ಲ್ಯಾಂಡ್ ಲಾರ್ಡ್ ಸಿನಿಮಾ ಎಲ್ಲೆಡೆ ಜೋರಾಗಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಪಾಸಿಟಿವ್ ಚರ್ಚೆಗಳು ನಡೆಯುತ್ತಿವೆ. ಇದೇ ಭರವಸೆಯಲ್ಲಿ ಹೋಗಿ ಸಿನಿಮಾ ವೀಕ್ಷಿಸಿದಾಗ ನಮ್ಮ ನಿರೀಕ್ಷೆ ಹುಸಿಯಾಗಲಿಲ್ಲ.
ಜಮೀನ್ದಾರಿ ವ್ಯವಸ್ಥೆ, ಅದನ್ನು ಪೋಷಿಸುವ ಜಾತಿ ವ್ಯವಸ್ಥೆ, ಭೂಮಿಯ ಹಕ್ಕಿನ ಪ್ರಶ್ನೆ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳನ್ನು ನೆಲೆಗೊಳಿಸಬೇಕಾದ ತುರ್ತು,ಮಹತ್ವದ ಕುರಿತು ಪರಿಣಾಮಕಾರಿಯಾಗಿ ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.
ಸಿನಿಮಾದ ಮೊದಲ ಭಾಗದಲ್ಲಿ ಊರಿನ ಸಾಮಾಜಿಕ ಸಂಬಂಧಗಳನ್ನ ಮತ್ತು ಕೆಲವು ಸನ್ನಿವೇಶಗಳನ್ನ ಸಿನಿಮಾ ಸಹಜವಾಗಿ ಕಟ್ಟಿಕೊಡುತ್ತದೆ. ಆದರೆ, ಹಳ್ಳಿಗಾಡಿನ ಮನೆಗಳನ್ನ ಮತ್ತು ಜೀವನ ವಿಧಾನವನ್ನು ಇನ್ನೊಂದಷ್ಟು ಟ್ಯೂನ್ ಮಾಡಬಹುದಿತ್ತು.
ಸಿನಿಮಾದಲ್ಲಿ ಬರುವ ಭಾವುಕ ಸನ್ನಿವೇಶಗಳು ನೋಡುಗರ ಮನಸ್ಸನ್ನು ತಟ್ಟುತ್ತವೆ. ನಂತರದಲ್ಲಿ ಭೂಮಾಲಿಕರು, ಕೂಲಿ ಕಾರ್ಮಿಕರನ್ನು ನಡೆಸಿಕೊಳ್ಳುವ ಘಟನಾವಳಿಗಳು, ಜಾತಿ ಕ್ರೌರ್ಯದ ತೀವ್ರತೆ ಮನಸ್ಸಿಗೆ ನಾಟುತ್ತಾ ಹೋಗುತ್ತವೆ.
ದೇವದಾಸಿ, ಬಸವಿ ಬಿಡುವ ಪದ್ಧತಿ ಹೇಗೆ ಮಹಿಳಾ ಶೋಷಣೆಯೊಂದಿಗೆ ಹೆಣೆದುಕೊಂಡಿವೆ. ಅಸ್ಪೃಶ್ಯ, ದಮನಿತ ಜಾತಿಗಳ ಹೆಣ್ಣುಮಕ್ಕಳು ಎಂತೆಂಥಾ ನೆಪದಲ್ಲಿ ಬಲಿಪಶುಗಳಾಗುತ್ತಾರೆ. ಅಂತಹ ಹೆಣ್ಣು ಮಕ್ಕಳೇ ಪ್ರತಿರೋಧಕ್ಕೆ ನಿಂತಾಗ ಪರಿಸ್ಥಿತಿ ಹೇಗೆ ಬದಲಾಗುತ್ತದೆ ಎಂಬುದನ್ನು ಸಹಾ ತೋರಿಸಲಾಗಿದೆ.
ಇಡೀ ಸಿನಿಮಾದಲ್ಲಿ ಬರುವ ಮಹಿಳಾ ಪಾತ್ರಗಳನ್ನ ರಾಚಯ್ಯನ ಪಾತ್ರದಷ್ಟೇ ಸಶಕ್ತವಾಗಿ ಕಟ್ಟಿಕೊಡಲಾಗಿದೆ. ಅಭಿನಯದ ವಿಷಯದಲ್ಲಿ ಉಮಾಶ್ರೀ, ದುನಿಯಾ ವಿಜಯ್, ರಚಿತಾರಾಮ್ ಎಲ್ಲರೂ ತಮ್ಮ ಅನನ್ಯತೆಯನ್ನು ಸಾಬೀತು ಮಾಡಿದ್ದಾರೆ.
ಲ್ಯಾಂಡ್ ಲಾರ್ಡ್ ಸಿನಿಮಾವನ್ನು ಇನ್ನೂ ನೋಡದೇ ಇರುವವರು ಮಿಸ್ ಮಾಡದೆ ನೋಡಿ…
-ಸಿನಿಮಾ ವಿಮರ್ಶಕಿ ಶಾಂತ ಗುಂಡಪ್ಪ

































