ಲಂಕೇಶ್ ಆಶಯ ಒಂದು ತಲೆಮಾರಿನೊಂದಿಗೆ ಬದುಕಿರುವುದೇ ಸೌಭಾಗ್ಯ ಡಾ.ಲೋಕೇಶ್ ಅಗಸನಕಟ್ಟೆ.!

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ಲಂಕೇಶ್ ಆಶಯಗಳನ್ನು ಪಾಲಿಸಿಕೊಂಡು ಬಂದ ಒಂದು ತಲೆಮಾರಿನೊಂದಿಗೆ ಬದುಕಿರುವುದೇ ಸೌಭಾಗ್ಯ. ದಲಿತ ಹಾಗೂ ಸ್ತ್ರೀ ಸಂವೇದನೆಗಳಂತಹ ವಿಚಾರಗಳು ಸಂವಿಧಾನದ ಮೂಲ ಆಶಯಗಳೇ ಆಗಿವೆ ಎಂದು ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ ಹೇಳಿದರು.

ನಗರದ ರೋಟರಿ ಭವನದಲ್ಲಿ ಭಾನುವಾರ ಆಶಯ, ಅರಳಿ, ಗೆಳೆಯರ ಬಳಗ, ರೋಟರಿ ಕ್ಲಬ್ ಚಿನ್ಮೂಲಾದ್ರಿ ವೇದಿಕೆಯಿಂದ ಆಯೋಜಿಸಿದ್ದ ಪತ್ರಕರ್ತ ಟಿ.ಎನ್.ಷಣ್ಮುಖ ಬದುಕು ಮತ್ತು ಬರಹ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಸಮ ಸಮಾಜದ ಕನಸು, ಸಮತಾವಾದ ಮತ್ತು ಮೌಢ್ಯ ಮೀರಿದ ಜನಪರ ಚಿಂತನೆ ಹೊಂದಿರುವ ಎಲ್ಲರೂ ಸಮಾಜ ಪರಿವರ್ತನೆಗಾಗಿ ಹೋರಾಡುವ ಗೆಳೆಯರಾಗಿದ್ದಾರೆ ಎಂದರು.

ಸನಾತನ ನಂಬಿಕೆಗಳ ಆಧಾರದ ಮೇಲೆ ಬಹುಜನ ಸಮಾಜದ ಶೋಷಣೆ ನಡೆಯುತ್ತಿರುವುದನ್ನು ತಮ್ಮ ಬರಹಗಳ ಮೂಲಕ ಷಣ್ಮುಖ ಪ್ರಶ್ನಿಸಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಹೊಸ ಜೀವ ತುಂಬಿದಂತೆ, ಅವರ ಚಿಂತನೆಗಳು ಮತ್ತು ಆಶಯಗಳು ಸಾಹಿತ್ಯ ಕೃತಿಗಳಲ್ಲೂ ಪ್ರತಿಫಲಿಸುತ್ತವೆ. ಸಮಾಜದಲ್ಲಿ ಸಾಧ್ಯವಾಗುವುದಿಲ್ಲವೆಂದು ಭಾಸವಾಗುವ ವಿಚಾರಗಳನ್ನೇ ಸಾಧ್ಯವೆಂದು ಕಟ್ಟಿಕೊಡುವ ಕನಸು ಬರಹಗಾರರಲ್ಲಿ ಇರಬೇಕು ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತ ಟಿ.ಎನ್.ಷಣ್ಮುಖ ಪಾದರಸದಂತ ವ್ಯಕ್ತಿತ್ವ ಹೊಂದಿದ್ದು, ನಿಂತಲ್ಲಿಯೇ ಪ್ರತಿಭಟಿಸುವ ಧೈರ್ಯ ಹೊಂದಿದ್ದರು. ತಮ್ಮಿಗೆ ಆಗುವ ನಷ್ಟದ ಬಗ್ಗೆ ಚಿಂತಿಸದೆ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ವ್ಯಕ್ತಿತ್ವ ಅವರದು. ಅವ್ಯವಸ್ಥೆಗಳ ವಿರುದ್ಧ ನಿರ್ಭಯವಾಗಿ ಬರೆಯುತ್ತಾ ಅನೇಕ ವಿರೋಧಗಳನ್ನು ಎದುರಿಸಿದ ಅವರು, ಸುಮಾರು 15 ಕೃತಿಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.

ಸಾಹಿತಿ ದಾದಾಪೀರ್ ನವೀಲೆಹಾಳ್ ಮಾತನಾಡಿ, ಇಂದಿನ ಕಾಲದಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿರುವುದರಿಂದ ಜನರು ಏಕಾಂಗಿ ಜೀವನಕ್ಕೆ ಸಿಲುಕುತ್ತಿದ್ದಾರೆ. ಚರ್ಚೆ, ಚಳವಳಿ ಮತ್ತು ಸಾಮಾಜಿಕ ಸಂವಾದಗಳು ಕಡಿಮೆಯಾಗುತ್ತಿರುವುದು ಆತಂಕಕಾರಿ ಎಂದು ಹೇಳಿದರು. ಜಾತಿ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅಸಮಾನತೆಗಳು ಸಮಾಜದಲ್ಲಿ ಇನ್ನೂ ಗಟ್ಟಿಯಾಗುತ್ತಿವೆ. ದಲಿತ ಬಂಡಾಯ ಚಳವಳಿ ಸಮಾಜದಲ್ಲಿ ದೊಡ್ಡ ಕಂಪನೆಯನ್ನು ಉಂಟುಮಾಡಿದ್ದು, ಅಲಕ್ಷಿತ ಧ್ವನಿಗಳಿಗೆ ವೇದಿಕೆ ಒದಗಿಸಿತು ಎಂದು ಹೇಳಿದರು.

ಹೋರಾಟದ ಆವೇಶ ಮತ್ತು ಸಾಮಾಜಿಕ ಬದ್ಧತೆಯೊಂದಿಗೆ ಬೆಳೆದವರು ಷಣ್ಮುಖ. ಸಮಾಜದ ಸಮಸ್ಯೆಗಳನ್ನು ತನ್ನದೇ ಸಮಸ್ಯೆ ಎಂದು ಭಾವಿಸಿ ಹೋರಾಟ ನಡೆಸಿದ ವ್ಯಕ್ತಿತ್ವ ಅವರದ್ದು. ಲಂಕೇಶ್ ಚಿಂತನೆಗಳನ್ನು ಓದಿಕೊಂಡವರಲ್ಲಿ ಸ್ಪಷ್ಟ ಕಲ್ಪನೆ ಹಾಗೂ ದೂರದೃಷ್ಟಿ ಕಂಡುಬರುತ್ತದೆ. ಲಂಕೇಶ್ ಶಿಷ್ಯರಲ್ಲಿ ಚಳ್ಳಕೆರೆ ಯರ್ರಿಸ್ವಾಮಿ ಮತ್ತು ಷಣ್ಮುಖ ಪ್ರಮುಖರು ಎಂದು ತಿಳಿಸಿದರು.

ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ಸಾಂಸ್ಕೃತಿಕ ಮನಸ್ಸುಗಳಲ್ಲಿ ಕ್ರೌರ್ಯ ಮೂಡುವುದಿಲ್ಲ, ಅಲ್ಲಿ ಯುದ್ಧಗಳಿಗೂ ಅವಕಾಶ ಇರುವುದಿಲ್ಲ. ಓದುವ ಸಂಸ್ಕೃತಿ ಹಿಂದೆ ಸಮಾಜದಲ್ಲಿ ಒತ್ತಡ ತಣಿಸುವ ಒಂದು ಮಾರ್ಗವಾಗಿತ್ತು. ಹೊಸ ವ್ಯಕ್ತಿತ್ವಗಳನ್ನು ಪರಿಚಯಿಸುವ ಸಾಹಿತ್ಯಿಕ ಸಂಸ್ಕೃತಿ ಬೆಳೆಯಬೇಕಿದೆ. ಸಂವೇದನಶೀಲತೆ ಮತ್ತು ಆಪ್ತತೆಯ ಮನಸ್ಸುಗಳು ಸಮಾಜಕ್ಕೆ ಅಗತ್ಯ ಎಂದು ಹೇಳಿದರು.

ಹಿರಿಯ ಪತ್ರಕರ್ತ ಚಳ್ಳಕೆರೆ ಯರ್ರಿಸ್ವಾಮಿ ಮಾತನಾಡಿ, ಷಣ್ಮುಖ ಅವರು ಬರವಣಿಗೆ ಮತ್ತು ಪ್ರತಿಭಟನೆಗಳ ಉತ್ಸಾಹವನ್ನು ಅವರು ಎಂದಿಗೂ ಕಳೆದುಕೊಳ್ಳಲಿಲ್ಲ. ನಿಷ್ಠೂರವಾದಿ ವ್ಯಕ್ತಿತ್ವ. ವಿರೋಧಗಳನ್ನು ಕಟ್ಟಿಕೊಂಡು ಮುನ್ನಡೆಯುವ ಧೈರ್ಯ ಹೊಂದಿದ್ದರು. ಲಂಕೇಶ್ ಪರಂಪರೆ ಕ್ಷೀಣಿಸುತ್ತಿದೆ ಎಂಬ ಆತಂಕ ಇದ್ದರೂ, ಆ ಚಿಂತನೆಗಳು ಸದಾ ಜೀವಂತವಾಗಿವೆ. ವಿಜ್ಞಾನ ಪ್ರಗತಿ ಮತ್ತು ಮಾನವೀಯ ಚಿಂತನೆಗಳ ಮೂಲಕ ಸುಂದರ ಹಾಗೂ ಯುದ್ಧರಹಿತ ಜಗತ್ತಿನ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಟಿ.ಎನ್.ಷಣ್ಮುಖ ತಮ್ಮ ಜೀವನ ಅನುಭವಗಳನ್ನು ಹಂಚಿಕೊಂಡರು. ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕ ಜೋಗಿಮಟ್ಟಿ ಈ.ಮಹೇಶ್ ಬಾಬು, ಹಿರಿಯ ಪತ್ರಕರ್ತ ಗೌನಹಳ್ಳಿ ಗೋವಿಂದಪ್ಪ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಶ್ರೀನಿವಾಸ್ ಮಳಲಿ, ಪತ್ರಕರ್ತ ಕೆ.ಪಿ.ಎಂ.ಗಣೇಶಯ್ಯ, ಸಂಗೊಳ್ಳಿ ರಾಯಣ್ಣ ಸೇನೆ ರಾಜ್ಯಾಧ್ಯಕ್ಷ ಟಿ.ಆನಂದ್, ಸಾಮಾಜಿಕ ಕಾರ್ಯಕರ್ತ ಹೊಳೆಯಪ್ಪ ಕೆ.ಸಾಕ್ಯ ಇದ್ದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon