ಬೆಂಗಳೂರು : ಕಬ್ಬು ಬೆಳೆಗಾರರ ಮೇಲೆ ಲಾಠಿಚಾರ್ಜ್, ಪ್ರತಿಯಾಗಿ ಕಲ್ಲು ತೂರಾಟ ಎಂಬುದು ಸುಳ್ಳು ಸುದ್ದಿ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ.
ಪ್ರತಿಭಟನೆಯಲ್ಲಿ ನಿರತ ಕಬ್ಬು ಬೆಳೆಗಾರರ ಮೇಲೆ ಲಾಠಿಚಾರ್ಜ್, ಪ್ರತಿಯಾಗಿ ಕಲ್ಲು ತೂರಾಟ ಎಂಬುದು ಸುಳ್ಳು ಸುದ್ದಿ. 2021ರಲ್ಲಿ ಹರಿಯಾಣದ ಕರ್ನಲ್‌ನಲ್ಲಿ ನೂತನ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಫೋಟೋವನ್ನು ಕರ್ನಾಟಕದ್ದೆಂದು ಕೆಲವು ಮಾಧ್ಯಮಗಳು ತಪ್ಪಾಗಿ ತೋರಿಸುತ್ತಿವೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.
ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರ ಜೊತೆ ಚರ್ಚಿಸಿ ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿ ಮಾಡಲಾಗಿದೆ. ಕಾರ್ಖಾನೆಗಳು ಒಂದು ಟನ್‌ಗೆ ಹಿಂದೆ ನಿಗದಿಯಾಗಿದ್ದ ₹3,200ರ ಜೊತೆಗೆ ₹50 ಹಾಗೂ ರಾಜ್ಯ ಸರ್ಕಾರವು ಒಂದು ಅವಧಿಯ ಪ್ರೋತ್ಸಾಹ ಧನವಾಗಿ ₹50 ಪಾವತಿಸಲಿದೆ. ಸಾಗಣೆ ಮತ್ತು ಕಟಾವು ವೆಚ್ಚ ಹೊರತುಪಡಿಸಿ ಶೇ.10.5 ಇಳುವರಿ ಪ್ರಮಾಣ ಇರುವ ಪ್ರತಿ ಟನ್ ಕಬ್ಬಿಗೆ ₹3,200 ಹಾಗೂ ಶೇ. 11.25 ಇಳುವರಿ ಪ್ರಮಾಣ ಇರುವ ಕಬ್ಬಿಗೆ ₹3,300 ದರ ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

































