ಚಿತ್ರದುರ್ಗ : ಉನ್ನತ ಹುದ್ದೆಗೆ ಏರಿದ ಕೂಡಲೆ ಹೆತ್ತ ತಂದೆ ತಾಯಿಗಳು, ಬಂಧು ಬಳಗ, ಸಮಾಜವನ್ನು ಮರೆಯಬಾರದು. ಏನಾದರೂ ಕೊಡುಗೆ ನೀಡಬೇಕೆಂದು ಮಾದಿಗ ಸಮುದಾಯದ ನೌಕರರಿಗೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಕರೆ ನೀಡಿದರು.
ಜಿಲ್ಲಾ ಮಾದಿಗ ನೌಕರರ ಸಾಂಸ್ಕøತಿಕ ಸಂಘದ ವತಿಯಿಂದ 2024-25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೆ.ಇ.ಬಿ.ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಗಾಟಿಸಿ ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುವುದರಿಂದ ಇತರೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದಂತಾಗುತ್ತದೆ. ಸ್ಪರ್ಧಾತ್ಮಕ ಯುಗವಾಗಿರುವುದರಿಂದ ಒಂದೊಂದು ಅಂಕಗಳಿಗೂ ಪೈಪೋಟಿಯಿದೆ. ಮೊಬೈಲನ್ನು ಒಳ್ಳೆಯದಕ್ಕಷ್ಟೆ ಬಳಸಿಕೊಳ್ಳಿ. ಬಹಳಷ್ಟು ವಿದ್ಯಾರ್ಥಿಗಳು ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಗುರಿ ದೊಡ್ಡದಿದ್ದರೆ ಮುಟ್ಟಲು ಸಾಧ್ಯ ಎಂದು ಹೇಳಿದರು.
ಒಳ ಮೀಸಲಾತಿಗೆ ಬಹಳಷ್ಟು ಮಾದಿಗರು ಹೋರಾಟ ನಡೆಸಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿಟ್ಟ ತೀರ್ಮಾನ ತೆಗೆದುಕೊಂಡು ಜಾರಿಗೊಳಿಸಿದ್ದಾರೆ. 30 ವರ್ಷಗಳ ಹೋರಾಟಕ್ಕೆ ಸಿಕ್ಕಿರುವ ಫಲವನ್ನು ಬಳಸಿಕೊಂಡು ಮಾದಿಗ ಸಮುದಾಯ ಬಲಿಷ್ಠವಾಗಬೇಕೆಂದು ತಿಳಿಸಿದರು.
ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತ ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲಾ ಜಾತಿ ಧರ್ಮದವರು ಹೋರಾಡಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ತ್ಯಾಗ ಬಲಿದಾನವಿದೆ. ಒಳ ಮೀಸಲಾತಿಗೆ ಹೋರಾಡಿ ಈಗ ಎರಡನೆ ಸ್ವಾತಂತ್ರ್ಯ ಪಡೆದಿದ್ದೇವೆ. ಶೇ.6 ರಷ್ಟು ಮೀಸಲಾತಿ ಸಿಕ್ಕಿದೆ. ಅದನ್ನು ಹೇಗೆ ಬಳಸಿಕೊಂಡು ಸಮಾಜ ಕಟ್ಟಬೇಕೆನ್ನುವ ಚಿಂತನೆಯಾಗಬೇಕು. ಹೋರಾಟ ತ್ಯಾಗ ನಮ್ಮ ಕಾಲದಲ್ಲಿಯೇ ಆಗಿದೆ. ಫಲ ಉಣ್ಣುವವರು ನಮ್ಮ ಕಾಲದವರೆ ಎಂದರು.
ನಮ್ಮಲ್ಲಿಯೇ ಪೈಪೋಟಿಯಿರುವುದರಿಂದ ಶ್ರದ್ದೆಯಿಂದ ಓದಿ ಹೆಚ್ಚಿನ ಅಂಕ ಗಳಿಸಲೇಬೇಕು. ಜನಸಂಖ್ಯೆ ಜಾಸ್ತಿಯಾಗುತ್ತಿದೆ. ನೌಕರಿ ಕಡಿಮೆಯಿದೆ. ಶಿಕ್ಷಣದ ಜೊತೆ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಿ. ಇಲ್ಲದಿದ್ದರೆ ನೌಕರಿ ಸಿಗುವುದು ಕಷ್ಟ. ಮಕ್ಕಳ ಆಸಕ್ತಿಗನುಗುಣವಾಗಿ ಪೋಷಕರುಗಳು ಪ್ರೋತ್ಸಾಹಿಸಬೇಕೆಂದು ಮಾದಿಗ ಜನಾಂಗದವರಲ್ಲಿ ಸ್ವಾಮೀಜಿ ಮನವಿ ಮಾಡಿದರು.
ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ಯಾವುದನ್ನು ತಿರಸ್ಕರಿಸುವಂತಿಲ್ಲ. ಓದಷ್ಟೆ ಜೀವನಕ್ಕೆ ಆಧಾರವಲ್ಲ. ಮಾನವನ ಬದುಕು ಭೂಮಿಗೆ ಹೇಗೆ ಸದ್ಬಳಕೆಯಾಗಬೇಕೆಂಬುದರ ಬಗ್ಗೆ ಆಲೋಚಿಸಬೇಕು. ಭಾವನಾತ್ಮಕ ಸಂಬಂಧಗಳನ್ನು ಮಕ್ಕಳಲ್ಲಿ ಬೆಳೆಸಬೇಕಿದೆ. ಒಳ ಮೀಸಲಾತಿ ವರ್ಗಿಕರಣವಾಗಿರುವುದರಿಂದ ವಿಶಾಲವಾದ ಸೌಲತ್ತಿದೆ. ಎಲ್ಲವನ್ನು ಜೀವನದಲ್ಲಿ ಸದುಪಯೋಗಪಡಿಸಿಕೊಳ್ಳಿ. ಆರ್ಥಿಕವಾಗಿ ಸಬಲೀಕರಣವಾದರೆ ಜಾತಿ ಅಡ್ಡ ಬರುವುದಿಲ್ಲ. ನಮ್ಮ ಜಾತಿಯ ಅಧಿಕಾರಿಗಳು ಈ ಸಮಾರಂಭಗಳಿಗೆ ಬೆಂಬಲವಾಗಿ ನಿಲ್ಲಬೇಕು. ಮೈಸೂರು ಮಹಾರಾಜರು ಸಾಮಾಜಿಕ ನ್ಯಾಯ ಕೊಟ್ಟರು. ಪ್ರತಿಭಾ ಪುರಸ್ಕಾರಕ್ಕೊಳಗಾಗಿರುವ ಮಕ್ಕಳು ಮುಂದೆ ನೆರಳು ಕೊಡುವ ಮರವಂತೆ ಬೆಳೆಯಬೇಕೆಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ವಿಭಾಗ, ಲೋಕೋಪಯೋಗಿ ಇಲಾಖೆ ಬೆಂಗಳೂರಿನ ಮುಖ್ಯ ಅಭಿಯಂತರ ಕೆ.ಜಿ.ಜಗದೀಶ್ ಮಾತನಾಡಿ ಮಾದಿಗ ಜನಾಂಗದಲ್ಲಿರುವ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದಕ್ಕಾಗಿ ಪ್ರತಿ ವರ್ಷವೂ ಪ್ರತಿಭಾ ಪುರಸ್ಕಾರ ನೆರವೇರಿಸಿಕೊಂಡು ಬರಲಾಗುತ್ತಿದೆ. ಕಳೆದ ಇಪ್ಪತ್ತೈದು ಮೂವತ್ತು ವರ್ಷಗಳಿಂದಲೂ ಒಳ ಮೀಸಲಾತಿಗಾಗಿ ಹೋರಾಟ ನಡೆಸಿದ್ದರ ಪರಿಣಾಮವಾಗಿ ರಾಜ್ಯ ಸರ್ಕಾರ ಶೇ.6 ರಷ್ಟು ಮೀಸಲಾತಿಯನ್ನು ನೀಡಿದೆ. ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿಯಿರುವುದರಿಂದ ಚೆನ್ನಾಗಿ ಓದಿ ಅಂಕಗಳನ್ನು ಗಳಿಸಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ಮಕ್ಕಳು ಓದಿದಾಗ ವಿದ್ಯೆ ಚೆನ್ನಾಗಿ ನಾಟುತ್ತದೆ. ಇದಕ್ಕೆ ಪೋಷಕರುಗಳ ಜವಾಬ್ದಾರಿಯಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಮಾತನಾಡುತ್ತ ಪ್ರತಿಭೆಗಳನ್ನು ಗುರುತಿಸುವುದು ನಮ್ಮೆಲ್ಲರ ಹೊಣೆಗಾರಿಕೆ. ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕಾಗಿದೆ. ಇದರಿಂದ ಮುಂದಿನ ಭವಿಷ್ಯ ರೂಪಿಸಿಕೊಂಡು ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಒಳ ಮೀಸಲಾತಿಯಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತ ನ್ಯಾಯ ಸಿಕ್ಕಿಲ್ಲ. ರಾಜ್ಯದಲ್ಲಿ ನಲವತ್ತು ಲಕ್ಷ ಜನಸಂಖ್ಯೆಯಿದೆ. ಕೇವಲ ಶೇ.6 ರಷ್ಟು ಮೀಸಲಾತಿ ನೀಡಿರುವುದು ಎಲ್ಲೋ ಒಂದು ಕಡೆ ಕಸಿವಿಸಿಯಿದೆ. ಶೇ.7 ರಷ್ಟಾದರೂ ಸಿಗಬೇಕಿತ್ತು. ಮಾದಿಗ ಸಮುದಾಯ ನೂರಾರು ಸಂಘಟನೆಗಳನ್ನಿಟ್ಟುಕೊಂಡು ಹೋರಾಟ ನಡಸುತ್ತಿದೆ. ಶಿಕ್ಷಣ, ಮೀಸಲಾತಿಯಲ್ಲಿ ಪಾಲು ಪಡೆಯಲು ಹೋರಾಟ ಮಾಡಬೇಕು. ಆರ್ಥಿಕ, ನ್ಯಾಯಾಂಗ ಕ್ಷೇತ್ರದಲ್ಲಿ ಪ್ರಾತಿನಿಧ್ಯ ಕಮ್ಮಿಯಿದೆ. ಮಾಧ್ಯಮ ಕ್ಷೇತ್ರದಲ್ಲಿ ನಮ್ಮ ಸಮುದಾಯ ಪ್ರವೇಶಿಸಬೇಕು. ಶೇ.75 ರಷ್ಟು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಉಳಿದ ಶೇ.25 ರಷ್ಟು ಮಕ್ಕಳು ಖಾಸಗಿ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಸಹಕಾರ ಸಂಘಗಳನ್ನು ಸ್ಥಾಪಿಸಿದಾಗ ಸ್ವಾವಲಂಭಿ, ಸ್ವಾಭಿಮಾನಿಗಳಾಗಬಹುದು ಎಂದು ಹೇಳಿದ ಡಾ.ಬಿ.ಎಂ.ಗುರುನಾಥ್ ಒಳ ಮೀಸಲಾತಿಗಾಗಿ ಹೋರಾಟ ನಡೆಸಿದ ಸಮುದಾಯದ ನಾಯಕರುಗಳನ್ನು ನೆನಪಿಸಿಕೊಂಡರು.
ಹಿಂದುಳಿದ ವರ್ಗಗಳ ಇಲಾಖೆಯ ನಿವೃತ್ತ ಅಧಿಕಾರಿ ಡಿ.ಟಿ.ಜಗನ್ನಾಥ್ ಮಾತನಾಡಿ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿ ಶೇ.6 ರಷ್ಟು ಮೀಸಲಾತಿಯನ್ನು ನೀಡಿದೆ. ನಮ್ಮ ಸಮುದಾಯದ ವಿದ್ಯಾರ್ಥಿಗಳು ಮೀಸಲಾತಿಯನ್ನು ಬಳಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ. ಕಳೆದ 23 ವರ್ಷಗಳಿಂದಲೂ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪುರಸ್ಕರಿಸಲಾಗುತ್ತಿದ್ದು, ಇದಕ್ಕೆ ಸಮುದಾಯದ ನೌಕರರ ಸಹಕಾರವಿದೆ. ಮೊಬೈಲ್ಗೆ ಮಕ್ಕಳು ದಾಸರಾಗದೆ ಶಿಕ್ಷಣದ ಕಡೆ ಗಮನ ಕೊಟ್ಟು ಉನ್ನತ ಹುದ್ದೆಗಳನ್ನು ಪಡೆದುಕೊಂಡು ಸಮುದಾಯಕ್ಕೆ ಕೊಡುಗೆ ಕೊಡಿ ಎಂದು ವಿನಂತಿಸಿದರು.
ಜಿಲ್ಲಾ ಮಾದಿಗ ನೌಕರರ ಸಾಂಸ್ಕøತಿಕ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು.
ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಆರ್.ನಾಗರಾಜ್, ಹಾವೇರಿ ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿವೃತ್ತ ಕಾರ್ಯದರ್ಶಿ ಎಂ.ರೇವಣಸಿದ್ದಪ್ಪ, ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರೇಮ್ನಾಥ್, ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ
ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎನ್.ಪಾತಪ್ಪ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಖಜಾಂಚಿ ಎ.ಮಲ್ಲಿಕಾರ್ಜುನ, ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಹೆಚ್.ಬಸವರಾಜಪ್ಪ, ಮಾದಿಗ ನೌಕರರ ಸಾಂಸ್ಕøತಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ತಿಪ್ಪೇಸ್ವಾಮಿ, ಖಜಾಂಚಿ ಬಿ.ರುದ್ರಮುನಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.