ನವದೆಹಲಿ : ಪಕ್ಷದಲ್ಲಿ ತಟಸ್ಥ ನಿಲುವು ಹೊಂದಿರುವ ನಾಯಕರಿಗೆ ಯಡಿಯೂರಪ್ಪ ಕುಟುಂಬದ ಮೇಲೆ ಆಕ್ರೋಶ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ಬಿಜೆಪಿ ಬಣದ ಜಗಳದ ನಡುವೆ ಯತ್ನಾಳ್ ನೇತೃತ್ವದ ಟೀಂ ದೆಹಲಿಯಲ್ಲಿ ಬೀಡುಬಿಟ್ಟಿದೆ. ನಿನ್ನೆ ರಾತ್ರಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನು ಯತ್ನಾಳ್ ತಂಡ ಭೇಟಿಯಾಗಿದೆ. ಪಕ್ಷದ ಬೆಳವಣಿಗೆಗಳ ಬಗ್ಗೆ ನಾಯಕರು ಸಮಾಲೋಚನೆ ನಡೆಸಿದ್ದಾರೆ.
ಭೇಟಿಗೂ ಮುನ್ನ ಪ್ರತಿಕ್ರಿಯೆ ನೀಡಿದ ಯತ್ನಾಳ್, ಆರು ಪೇಜ್ ಉತ್ತರ ತಯಾರು ಮಾಡಿದ್ದೇನೆ. ಅದನ್ನು ನೀಡುತ್ತೇನೆ. ಜೊತೆಗೆ ವಿವರಣೆ ಕೊಡುತ್ತೇನೆ. ಪಕ್ಷದಲ್ಲಿ ತಟಸ್ಥ ನಿಲುವು ಹೊಂದಿರುವ ನಾಯಕರು ಇದ್ದಾರೆ. ಅವರಿಗೆ ಯಡಿಯೂರಪ್ಪ ಕುಟುಂಬದ ಮೇಲೆ ಆಕ್ರೋಶ ಇದೆ. ಅವರು ಬಹಿರಂಗವಾಗಿ ಮಾತನಾಡುತ್ತಿಲ್ಲ ಎಂದು ಹೇಳಿದರು.
ಭ್ರಷ್ಟಾಚಾರ ಕುಟುಂಬದ ಕಪಿಮುಷ್ಠಿಯಿಂದ ಹೊರ ಬರಬೇಕು ಎನ್ನುವ ಭಾವನೆ ಎಲ್ಲರಲ್ಲಿ ಇದೆ. ನಿನ್ನೆ ನಡೆದ ಸಂಸದರ ಸಭೆಯಲ್ಲಿ ಯಾರೂ ನನ್ನ ವಿರುದ್ಧ ಮಾತನಾಡಿಲ್ಲ. ನನ್ನ ಉಚ್ಚಾಟನೆ ಮಾಡಿ ಎಂದು ಯಾರೂ ಹೇಳಿಲ್ಲ. ಎಲ್ಲರೂ ಪಕ್ಷದ ಪರವಾಗಿ ಮಾತನಾಡಿದ್ದಾರೆ. ನಾನು ಯಾರ ವಿರುದ್ಧವೂ ಮಾತನಾಡಿಲ್ಲ. ಕೇವಲ ಬಿಎಸ್‌ವೈ ಕುಟುಂಬದ ವಿರುದ್ಧ ಮಾತನಾಡಿದ್ದೇನೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸಿದೆ ಎಂದು ತಿಳಿಸಿದರು.