ಲಿಚ್ಚಿಹಣ್ಣು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗೂ ಈ ಹಣ್ಣಿನಲ್ಲಿ ಹೇರಳವಾಗಿರುವ ಜೀವಸತ್ವ ಸಿ ನಮಗೆ ಅಂಟು ರೋಗ ಅಥವಾ ಸಾಂಕ್ರಾಮಿಕ ರೋಗವನ್ನು ತಡೆಯಲು ಸಹಕಾರಿಯಾಗಿದೆ.
ಈ ಹಣ್ಣಿನಲ್ಲಿ ಸಾಕಷ್ಟು ರೋಗ ನಿರೋಧಕ ಶಕ್ತಿ ಇರುವುದರಿಂದ ಅಸ್ತಮಾದಿಂದ ಬಳಲುತ್ತಿರುವ ಜನರಿಗೆ ಉತ್ತಮವಾಗಿ ಉಸಿರಾಡಲು ಸಹಾಯ ಮಾಡುತ್ತದೆ. ಅಲ್ಲದೆ, ದೇಹದ ತೂಕನ್ನೂ ಇಳಿಸಲು ಸಹಾಯ ಮಾಡುತ್ತದೆ. ಲಿಚ್ಚಿ ಹಣ್ಣು ಮೂಲತಃ ಚೀನಾ ರಾಷ್ಟ್ರದಿಂದ ಬಂದಿದ್ದು, ಇದೀಗ ಆಗ್ನೇಯ ಏಷ್ಯಾದ ದೇಶಗಳಲ್ಲಿಯೂ ಬೆಳೆಯಲಾಗುತ್ತಿದೆ.
ಒಂದು ಬೌಲ್ ಲಿಚ್ಚಿ ಹಣ್ಣಿನಲ್ಲಿ 126 ಕ್ಯಾಲೊರಿಗಳಿದ್ದು, ಒಂದು ಗ್ರಾಂನಷ್ಟು ಕೊಬ್ಬು ಇರುತ್ತದೆ. ಪ್ರೋಟೀನ್ ಹಾಗೂ ಫೈಬರ್ ಗಳು 2.5 ಗ್ರಾಮಗಳಷ್ಟಿರುತ್ತವೆ. ಹಣ್ಣಿನಲ್ಲಿ 28 ಗ್ರಾಮಗಳಷ್ಟು ಸಕ್ಕರೆ ಅಂಶ ಇರುವುದರಿಂದ ಮಧುಮೇಹ ಇರುವವರು ಜಾಗೃತೆ ವಹಿಸಬೇಕಿದೆ. ಈ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚಾಗಿದ್ದು, ವಿಟಮನ್ ಸಿ ಹೇರಳವಾಗಿರುವುದರಿಂದ ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ಲಿಚ್ಚಿಯಲ್ಲಿರುವ ಕರಗುವ ನಾರುಗಳು ಆಮ್ಲೀಯತೆ ಮತ್ತು ಅಜೀರ್ಣತೆ ಇರುವ ಸಮಯದಲ್ಲಿ ಸಹಾಯ ಮಾಡುತ್ತದೆ. ವಿಟಮಿನ್ ಸಿ ಹೆಚ್ಚಾಗಿರುವುದರಿಂದ ಮಳೆಗಾಲದಲ್ಲಿ ಬರುವಂತರ ನೆಗಡಿ ಕೂಡ ಕಡಿಮೆ ಮಾಡುತ್ತದೆ.
ತ್ವಚೆಯ ಮೇಲೆ ಮೂಡುವಂತಹ ಮೊಡವೆಗಳು, ತ್ವಚೆಯಲ್ಲಿ ಎದುರಾಗುವ ಇನ್ನಿತರೆ ಸಮಸ್ಯೆಗಳನ್ನು ಈ ಹಣ್ಣು ದೂರಾಗಿಸುತ್ತದೆ. ಸುಗಂಧ ಭರಿತ ವಾಸನೆಯನ್ನು ಈ ಹಣ್ಣು ಹೊಂದಿದ್ದು, ರುಚಿ ಮತ್ತು ಹೇರಳವಾದ ಪೋಷಕಾಂಶ ಹಾಗೂ ಜೀವಸತ್ವಗಳಿಂದ ಕೂಡಿದೆ. ಹಣ್ಣಿನಲ್ಲಿರುವ ಪೊಟ್ಯಾಶಿಯಂ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ದೇಹದ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಮಲಬದ್ಧತೆ ಹಾಗೂ ಜೀರ್ಣ ಸಮಸ್ಯೆಗಳನ್ನು ದೂರಾಗಿಸುತ್ತದೆ.
ಈ ಹಣ್ಣನ್ನು ಐಸ್ ಕ್ರೀಮ್ ಮತ್ತು ಜೆಲ್ಲಿಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದ್ದು, ಹಣ್ಣಿನ ತಿರುಳನ್ನು ಹಾಗೇ ತಿನ್ನಬಹುದು ಅಥವಾ ಜ್ಯೂಸ್ ಮಾಡಿಕೊಂಡು ಕುಡಿಯಬಹುದಾಗಿದೆ. ಸಾಮಾನ್ಯವಾಗಿ ಈ ಲಿಚ್ಚಿ ಹಣ್ಣು ಜೂನ್-ಜುಲೈ ತಿಂಗಳಿನಲ್ಲಿ ಮಾರುಕಟ್ಟೆಗೆ ಬರಲಿದ್ದು, ಲಿಚ್ಚಿ ಹಣ್ಣು ಸೇವನೆಗಿದು ಸಕಾಲವಾಗಿದೆ.


































