ಚಿತ್ರದುರ್ಗ : ಭಯವಿಲ್ಲದೆ ಮಕ್ಕಳು ಪರೀಕ್ಷೆ ಬರೆಯುವಂತ ಆತ್ಮವಿಶ್ವಾಸ ಮೂಡಿಸುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಉಪ ನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಸಮಾಜ ವಿಜ್ಞಾನ ಶಿಕ್ಷಕರುಗಳ ಕ್ಲಬ್ ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ಶಿಕ್ಷಕರುಗಳ ಶೈಕ್ಷಣಿಕ ಕಾರ್ಯಾಗಾರ ಉದ್ಗಾಟಿಸಿ ಮಾತನಾಡಿದರು.
ನಿಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಮಕ್ಕಳ ಮನಸ್ಸಿಗೆ ನಾಟುವ ರೀತಿಯಲ್ಲಿ ಪಠ್ಯವನ್ನು ಬೋಧಿಸಿದಾಗ ಹತ್ತನೆ ತರಗತಿ ಪರೀಕ್ಷೆಯಲ್ಲಿ ಫಲಿತಾಂಶ ಸುಧಾರಣೆಯಾಗಲಿದೆ. ಹಿಂದುಳಿದ ಚಿತ್ರದುರ್ಗ ಜಿಲ್ಲೆಯಲ್ಲಿ ರೈತರು, ಶ್ರಮಿಕರು, ಗ್ರಾಮೀಣ ಮಕ್ಕಳೆ ಜಾಸ್ತಿಯಿದ್ದಾರೆ. ವೇಳಾಪಟ್ಟಿ ಪ್ರಕಾರ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡು ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಲಾಗುತ್ತಿದೆ. ಈ ಬಾರಿಯ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆ ಟಾಪ್ ಟೆನ್ ಒಳಗೆ ಬರಬೇಕು. ಜಿಲ್ಲೆಯಲಿ ಅದ್ಬುತವಾದ ಶಿಕ್ಷಕರುಗಳಿದ್ದಾರೆ. ಮಕ್ಕಳ ಭವಿಷ್ಯ ರೂಪಿಸುವ ಕೆಲಸ ನಿಮ್ಮಿಂದಾಗಬೇಕು. ಪೋಷಕರುಗಳ ಸಭೆ ನಡೆಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಿದಾಗ ಮಾತ್ರ ಗುಣಮಟ್ಟದ ಫಲಿತಾಂಶ ಸಿಗುತ್ತದೆ ಎಂದರು.
ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕ ಪ್ರಶಾಂತ್ ಮಾತನಾಡಿ ಹತ್ತನೆ ತರಗತಿ ಪರೀಕ್ಷೆ ಫಲಿತಾಂಶ ಸುಧಾರಣೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರುಗಳ ಪಾತ್ರ ಪ್ರಮುಖವಾದುದು. ಮಕ್ಕಳನ್ನು ಕೇವಲ ಪಠ್ಯಕ್ಕಷ್ಟೆ ಸೀಮಿತಗೊಳಿಸಬಾರದು. ಶಿಕ್ಷಣದ ಜೊತೆ ಸಂಸ್ಕಾರ, ಮೌಲ್ಯವನ್ನು ಕಲಿಸಬೇಕಿದೆ. ಈಗಿನಿಂದಲೆ ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡಬೇಕಿದೆ ಎಂದು ಹೇಳಿದರು.
ವಿದ್ಯಾಧಿಕಾರಿಗಳಾದ ಎನ್.ಆರ್.ತಿಪ್ಪೇಸ್ವಾಮಿ, ಸಿದ್ದಪ್ಪ, ಡಿ.ವೈ.ಪಿ.ಸಿ.ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ವಿಷಯ ಪರಿವೀಕ್ಷಕರುಗಳಾದ ಶಿವಣ್ಣ, ಚಂದ್ರಣ್ಣ, ಗೋವಿಂದಪ್ಪ, ಮಹಲಿಂಗಪ್ಪ, ಸಮಾಜ ವಿಜ್ಞಾನ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಆರ್.ನಾಗರಾಜ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್, ಶ್ರೀನಿವಾಸ್, ಗೋವಿಂದಪ್ಪ, ಡಿ.ಎಸ್.ಪಾಲಯ್ಯ ಇನ್ನು ಅನೇಕರು ವೇದಿಕೆಯಲ್ಲಿದ್ದರು.