ಈ ಹಿಂದೆ ಕೆಲವು ಬಾರಿ ಅಂಡರ್‌ವರ್ಲ್ಡ್ ಸೇರಿದಂತೆ ಹಲವು ಕಡೆಗಳಿಂದ ಜೀವ ಬೆದರಿಕೆ ಕರೆಗಳು ಬಂದಿವೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ಹೇಳಿದ್ದಾರೆ. ಪಿಎಫ್‌ಐನಿಂದ ಯುಟಿ ಖಾದರ್‌ಗೆ ಜೀವ ಬೆದರಿಕೆ ಬಂದಿದೆ ಎಂಬ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನಗಾಗಿ ಮಂಗಳೂರಿನಲ್ಲಿ ಎನ್‌ಐಎ (NIA) ಸ್ಥಾಪನೆ ಮಾಡುವುದು ಬೇಡ, ಜಿಲ್ಲೆಯ ಜನಕ್ಕಾಗಿ ಮಾಡುವುದಾದರೆ ಮಾಡಲಿ ಎಂದಿದ್ದಾರೆ.
ಇದೇ ವೇಳೆ ಪಹಲ್ಗಾಮ್ ದಾಳಿ ಖಂಡಿಸಿ ಮಾತನಾಡಿದ ಅವರು, ಕೃತ್ಯವನ್ನು ಈಗಾಗಲೇ ಎಲ್ಲರೂ ಖಂಡಿಸಿದ್ದಾರೆ. ದಾಳಿಕೋರರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವದರ ಜೊತೆಗೆ ಅದರ ಹಿಂದೆ ಯಾರಿದ್ದಾರೋ ಅವರನ್ನು ಮಟ್ಟ ಹಾಕುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು. ದೇಶದ ಜನರು ಮೋದಿಯವರಿಂದ ಇದನ್ನೇ ಅಪೇಕ್ಷೆ ಪಡುತ್ತಾರೆ. ದಾಳಿಗೊಳಗಾದ ಜನರಿಗೆ ಮಾತ್ರವಲ್ಲ, ಇಡಿ ದೇಶದ ಜನರಿಗೆ ನ್ಯಾಯ ಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು ಎಂದರು.
ದೇಶದ ಸೌಹಾರ್ದತೆಯನ್ನು ಕದಡುವುದು ಭಯೋತ್ಪಾದಕ ಕೃತ್ಯದ ಉದ್ದೇಶವಾಗಿದ್ದು, ಜಾತ್ಯತೀತತೆಯನ್ನ ಹಾಳು ಮಾಡಿ, ದೇಶವನ್ನು ದುರ್ಬಲಗೊಳಿಸುವುದು ಅವರ ಗುರಿಯಾಗಿದೆ. ಈ ಕೃತ್ಯದ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಅದನ್ನೆಲ್ಲ ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು. ಯುದ್ಧ ಮಾಡಬೇಕಾ ಅಥವಾ ಬೇಡವಾ? ಎನ್ನುವುದು ಮೋದಿ ಹಾಗೂ ಸರ್ವಪಕ್ಷಗಳಿಗೆ ಬಿಟ್ಟಿದ್ದು ಎಂದರು.
ಇನ್ನೂ ಕೇಂದ್ರದಿಂದ ಜನಗಣತಿ ಜೊತೆಗೆ ಜಾತಿಗಣತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದು ಕೇಂದ್ರ ಮತ್ತು ರಾಜ್ಯಕ್ಕೆ ಬಿಟ್ಟಿದ್ದು, ಆಡಳಿತ ಪಕ್ಷ, ಪ್ರತಿಪಕ್ಷಗಳಿಗೆ ಮಿತ್ರನಾಗಿ ನಾನು ಸ್ಪೀಕರ್ ಆಗಿದ್ದೇನೆ. ನನ್ನ ಬಾಯಿಗೆ ಈಗ ಬೀಗ ಹಾಕಿದ್ದು, ನನ್ನ ಪ್ರಕಾರ ನಾನೂ ಮಾತನಾಡಿದ್ದೇನೆ ಎಂದು ಹೇಳಿದರು.