ಪೋರಬಂದರ್ : ಯಾವುದೇ ಆಧುನಿಕ ತಂತ್ರಜ್ಞಾನ, ಎಂಜಿನ್ ಅಥವಾ ಲೋಹಗಳ ಬಳಕೆಯಿಲ್ಲದೆ, ಕ್ರಿ.ಶ. 5ನೇ ಶತಮಾನದ ಸುಮಾರು 1500 ವರ್ಷ ಹಳೆಯ ಪ್ರಾಚೀನ ಭಾರತೀಯ ನೌಕಾ ತಂತ್ರಜ್ಞಾನವನ್ನು ಆಧರಿಸಿ ನಿರ್ಮಿಸಲಾದ ವಿಶಿಷ್ಟ ಹಡಗು ಐಎನ್‌ಎಸ್‌ವಿ ಕೌಂಡಿನ್ಯ ಸೋಮವಾರ ಗುಜರಾತ್‌ನ ಪೋರಬಂದರ್‌ನಿಂದ ಒಮಾನ್‌ನ ಮಸ್ಕತ್‌ಗೆ ತನ್ನ ಮೊದಲ ಸಮುದ್ರಯಾನ ಆರಂಭಿಸಿದೆ.
ಭಾರತದ ಪ್ರಾಚೀನ ಕಾಲದ ಹಡಗುಗಳು ಹೇಗೆ ಸಮುದ್ರಯಾನ ನಡೆಸುತ್ತಿದ್ದವು ಎಂಬುದನ್ನು ಪರೀಕ್ಷಿಸುವ ಉದ್ದೇಶದಿಂದ ಈ ಯಾನ ಕೈಗೊಳ್ಳಲಾಗಿದೆ. ಸಂಪೂರ್ಣವಾಗಿ ಗಾಳಿಯ ಶಕ್ತಿಯಿಂದ ಸಾಗುವ ಈ ಹಡಗಿಗೆ ಎಂಜಿನ್ ಇಲ್ಲ. ಲೋಹಗಳು ಅಥವಾ ಯಾವುದೇ ಆಧುನಿಕ ಯಂತ್ರಗಳನ್ನು ಬಳಸದೇ ನಿರ್ಮಿಸಿರುವುದು ಇದರ ಅತ್ಯಂತ ವಿಶೇಷತೆ.
ಐಎನ್‌ಎಸ್‌ವಿ ಕೌಂಡಿನ್ಯ ಎಂದರೇನು? : ಕ್ರಿ.ಪೂ. 5ನೇ ಶತಮಾನದಲ್ಲಿ ಭಾರತೀಯ ನೌಕಾ ವಲಯದಲ್ಲಿ ಅನುಸರಿಸಲಾಗುತ್ತಿದ್ದ ತಂತ್ರಗಳನ್ನು ಆಧರಿಸಿ ಈ ಹಡಗನ್ನು ನಿರ್ಮಿಸಲಾಗಿದೆ. ಅಜಂತಾ ಗುಹೆಗಳಲ್ಲಿನ ನೌಕೆಗಳ ಚಿತ್ರಣ, ಪ್ರಾಚೀನ ಭಾರತೀಯ ಗ್ರಂಥಗಳು ಹಾಗೂ ವಿದೇಶಿ ಪ್ರವಾಸಿಗರ ವಿವರಣೆಗಳನ್ನು ಅಧ್ಯಯನ ಮಾಡಿ ಇದರ ವಿನ್ಯಾಸ ರೂಪಿಸಲಾಗಿದೆ.
ಕಬ್ಬಿಣವನ್ನು ಸಂಪೂರ್ಣವಾಗಿ ತ್ಯಜಿಸಿ, ಮರದ ಹಲಗೆಗಳನ್ನು ತೆಂಗಿನ ನಾರಿನಿಂದ ಹೊಲಿದು ಜೋಡಿಸಲಾಗಿದೆ. ಈ ಕಾರಣದಿಂದ ಇದನ್ನು ‘ಹೊಲಿದ ಹಡಗು’ ಎಂದು ಕರೆಯಲಾಗುತ್ತದೆ. ನೀರು ಒಳನುಗ್ಗದಂತೆ ನೈಸರ್ಗಿಕ ರಾಳ, ಹತ್ತಿ ಮತ್ತು ತೈಲಗಳನ್ನು ಬಳಸಲಾಗಿದೆ. ‘ಟಂಕೈ’ ಎನ್ನುವ ಸಾಂಪ್ರದಾಯಿಕ ಭಾರತೀಯ ವಿಧಾನದಲ್ಲಿ ಹಡಗನ್ನು ಸಂಪೂರ್ಣ ಲೋಹರಹಿತ ಮತ್ತು ಎಂಜಿನ್‌ರಹಿತವಾಗಿ ಸಿದ್ಧಪಡಿಸಲಾಗಿದೆ.
ಈ ಹಡಗು 19.6 ಮೀಟರ್ ಉದ್ದ, 6.5 ಮೀಟರ್ ಅಗಲ ಮತ್ತು 3.33 ಮೀಟರ್ ಆಳ ಹೊಂದಿದ್ದು, ಇದರಲ್ಲಿ 15 ಮಂದಿ ನಾವಿಕರು ಪ್ರಯಾಣಿಸಬಹುದಾಗಿದೆ. ಮೊದಲು ಹಡಗಿನ ಮೂಲ ಆಕೃತಿಯನ್ನು ನಿರ್ಮಿಸಿ, ನಂತರ ಹಲಗೆಗಳನ್ನು ಜೋಡಿಸಿರುವುದರಿಂದ ಬಲವಾದ ಅಲೆಗಳ ಒತ್ತಡವನ್ನು ಹೀರಿಕೊಳ್ಳುವ ಸಾಮರ್ಥ್ಯ ಇದಕ್ಕಿದೆ.
ನಿರ್ಮಾಣದ ಕಥೆ: ಸಂಸ್ಕೃತಿ ಸಚಿವಾಲಯ, ಭಾರತೀಯ ನೌಕಾಪಡೆ ಹಾಗೂ ಹೋದಿ ಇನ್ನೋವೇಶನ್ಸ್ ಸಂಸ್ಥೆಯ ಸಹಯೋಗದಲ್ಲಿ 2023ರ ಜುಲೈನಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ಆರಂಭವಾಯಿತು. ಬಾಬು ಶಂಕರನ್ ಅವರ ನೇತೃತ್ವದ ಕೇರಳದ ಕುಶಲಕರ್ಮಿಗಳ ತಂಡ ಕೈಯಿಂದಲೇ ಈ ಹಡಗನ್ನು ನಿರ್ಮಿಸಿತು. ನಿಖರ ನೀಲನಕ್ಷೆಗಳು ಇಲ್ಲದ ಕಾರಣ, ಭಾರತೀಯ ನೌಕಾಪಡೆ ಒದಗಿಸಿದ ಪ್ರಾಚೀನ ಚಿತ್ರಗಳನ್ನು ಆಧರಿಸಿ ವಿನ್ಯಾಸ ರೂಪಿಸಲಾಯಿತು.
ಸುರಕ್ಷತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಐಐಟಿ ಮದ್ರಾಸ್‌ನಲ್ಲಿ ಹೈಡ್ರೊಡೈನಾಮಿಕ್ ಅಧ್ಯಯನಗಳು ಸೇರಿದಂತೆ ಹಲವು ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಲಾಯಿತು. 2025ರ ಫೆಬ್ರವರಿಯಲ್ಲಿ ಹಡಗಿನ ಮರುನಿರ್ಮಾಣ ಪೂರ್ಣಗೊಂಡು, ಮೇ ತಿಂಗಳಲ್ಲಿ ಕರ್ನಾಟಕದ ಕಾರವಾರದಲ್ಲಿ ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆ ಮಾಡಲಾಯಿತು.
ಕೌಂಡಿನ್ಯ ಯಾರು? : ಈ ಹಡಗಿಗೆ ಒಂದನೇ ಶತಮಾನದ ಪ್ರಸಿದ್ಧ ಭಾರತೀಯ ಕಡಲಯಾನಿ ಮಹರ್ಷಿ ಕೌಂಡಿನ್ಯರ ಸ್ಮರಣಾರ್ಥ ಹೆಸರಿಡಲಾಗಿದೆ. ಆಗ್ನೇಯ ಏಷ್ಯಾ ಕಡೆ ಸಮುದ್ರಯಾನ ನಡೆಸಿದ ಕೌಂಡಿನ್ಯರು ಕಾಂಬೋಡಿಯಾದ ಮೆಕಾಂಗ್ ಡೆಲ್ಟಾ ಪ್ರದೇಶ ತಲುಪಿದ್ದು, ‘ಫುನಾನ್’ ಸಾಮ್ರಾಜ್ಯದ ರಾಜಕುಮಾರಿ ಸೋಮರನ್ನು ವಿವಾಹವಾಗಿ ಆ ಸಾಮ್ರಾಜ್ಯವನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು ಎಂಬುದು ಇತಿಹಾಸದಲ್ಲಿದೆ.
ಭಾರತ–ಒಮಾನ್ ಮಾರ್ಗದ ಮಹತ್ವ : ಭಾರತ ಮತ್ತು ಒಮಾನ್ ನಡುವಿನ ಸಮುದ್ರ ಮಾರ್ಗವು ಪ್ರಾಚೀನ ಕಾಲದಲ್ಲಿ ಪ್ರಮುಖ ವ್ಯಾಪಾರ ದಾರಿಯಾಗಿತ್ತು. ಮಸಾಲೆ ಪದಾರ್ಥಗಳು, ಜವಳಿ ಸೇರಿದಂತೆ ಅನೇಕ ವಸ್ತುಗಳ ರಫ್ತು-ಆಮದುಗಾಗಿ ಈ ಮಾರ್ಗವನ್ನು ಬಳಸಲಾಗುತ್ತಿತ್ತು. ಪಶ್ಚಿಮ ಏಷ್ಯಾ, ಆಫ್ರಿಕಾ ಹಾಗೂ ಆಗ್ನೇಯ ಏಷ್ಯಾ ಜೊತೆಗಿನ ಸಂಪರ್ಕಕ್ಕೆ ಇದು ಪ್ರಮುಖ ಸೇತುವೆಯಾಗಿತ್ತು.
ಹಡಗಿನ ಮೇಲೆ ಭಾರತೀಯ ಸಂಸ್ಕೃತಿಯ ಗುರುತು:
ಕದಂಬರ ಲಾಂಛನವಾದ ಗಂಡಭೇರುಂಡ
ಹಾಯಿಗಳ ಮೇಲೆ ಸೂರ್ಯನ ಚಿಹ್ನೆ
ಪೌರಾಣಿಕ ಸಿಂಹದ ರೂಪವಾದ ಸಿಂಹ ಯಾಳಿ
ಡೆಕ್ ಮೇಲೆ ಹರಪ್ಪಾ ಶೈಲಿಯ ಕಲ್ಲಿನ ಆಧಾರ
ಪ್ರಧಾನಿ ಮೋದಿ ಪ್ರಶಂಸೆ : “ಭಾರತದ ಪ್ರಾಚೀನ ಹೊಲಿಗೆ-ಹಡಗು ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾದ ಐಎನ್‌ಎಸ್‌ವಿ ಕೌಂಡಿನ್ಯ ಪೋರಬಂದರ್‌ನಿಂದ ಮಸ್ಕತ್‌ಗೆ ತನ್ನ ಮೊದಲ ಸಮುದ್ರಯಾನ ಆರಂಭಿಸಿರುವುದು ಅದ್ಭುತ. ಈ ಹಡಗಿಗೆ ಮತ್ತೆ ಜೀವ ತುಂಬಿದ ವಿನ್ಯಾಸಕಾರರು, ಕುಶಲಕರ್ಮಿಗಳು, ಹಡಗು ನಿರ್ಮಾತೃಗಳು ಮತ್ತು ಭಾರತೀಯ ನೌಕಾಪಡೆಗೆ ಅಭಿನಂದನೆಗಳು. ಕೊಲ್ಲಿ ಪ್ರದೇಶದೊಂದಿಗೆ ನಮ್ಮ ಐತಿಹಾಸಿಕ ಬಾಂಧವ್ಯವನ್ನು ಮರು ಅನ್ವೇಷಿಸಲು ಹೊರಟಿರುವ ಸಿಬ್ಬಂದಿಗೆ ಶುಭ ಮತ್ತು ಸುರಕ್ಷಿತ ಪ್ರಯಾಣವನ್ನು ಕೋರುತ್ತೇನೆ,” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಸಮುದ್ರಯಾನವು ಭಾರತದ ಶ್ರೀಮಂತ ನೌಕಾ ಪರಂಪರೆ ಮತ್ತು ತಾಂತ್ರಿಕ ಜ್ಞಾನವನ್ನು ಜಗತ್ತಿಗೆ ಮರುಪರಿಚಯಿಸುವ ಐತಿಹಾಸಿಕ ಹೆಜ್ಜೆಯಾಗಿದೆ.

































