ಕಳೆದ ಒಂದು ವಾರದಿಂದ ನಿಧಾನವಾಗಿ ತೆಂಗಿನಕಾಯಿ ಬೆಲೆ ರಾಜ್ಯಾದ್ಯಂತ ಕುಸಿಯುತ್ತಿದೆ. ತೆಂಗು ಬೆಳೆಯುವ ಜಿಲ್ಲೆಗಳಾದ ಹಾಸನ, ತುಮಕೂರು ಮಂಡ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಾರುಕಟ್ಟೆಗಳಲ್ಲಿ ತೆಂಗಿನಕಾಯಿಯ ಚಿಲ್ಲರೆ ಬೆಲೆ ಕೆ.ಜಿ.ಗೆ 67 ರೂ. ಇದ್ದದ್ದು, ಇದೀಗ 57 ರೂ.ಗೆ ಇಳಿಕೆಯಾಗಿದೆ. ಬೆಂಗಳೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ತಮ ದಪ್ಪ ಗಾತ್ರದ ತೆಂಗಿನಕಾಯಿ 73 ರೂ.ಇದ್ದದ್ದು, ಈಗ 63 ರೂ.ಗೆ ಇಳಿದಿದೆ. ಮಧ್ಯ ಗಾತ್ರದ್ದು 65 ಇದ್ದದ್ದು, 55 ರೂ. ಇಳಿಕೆಯಾಗಿದೆ.
ಮದುವೆಗೆ ಉಪಯೋಗಿಸುವ ಸಣ್ಣ ಕಾಯಿಯ ಬೆಲೆ 35 ರಿಂದ 25ರೂ.ಗೆ ಇಳಿದಿದೆ. ಸಗಟು ದರ 10 ರೂ.ಇಳಿಕೆಯಾಗಿದ್ದು, ಚಿಲ್ಲರೆ ದರದಲ್ಲೂ 5-10 ರೂ.ಇಳಿಕೆಯಾಗಿದೆ. ಈ ಹಿಂದೆ ದಪ್ಪ ಕಾಯಿ ಕೆ.ಜಿ.ಗೆ 75 ಇದ್ದದ್ದು, ಈಗ 65 ರೂ. ಮಧ್ಯಮ ಗಾತ್ರ 70 ಇದ್ದದ್ದು 55 ರೂ.ಗೆ ಇಳಿಕೆಯಾಗಿದೆ. ಸಾಧಾರಣ ಕಾಯಿ 40 ರೂ.ಗೆ ಮಾರಾಟವಾಗುತ್ತಿದೆ.
ಜನರು ಖಾದ್ಯಕ್ಕಾಗಿ ತಾಳೆ ಎಣ್ಣೆಯನ್ನು ಬಳಸಲು ಪ್ರಾರಂಭಿಸಿರುವುದು ತೆಂಗಿನಕಾಯಿ ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಸದ್ಯದಲ್ಲೇ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಈ ಹೊತ್ತಿಗೆ ತೆಂಗಿನಕಾಯಿ ಬೆಲೆ ಇಳಿಕೆಯಾಗುತ್ತಿರುವುದು ಗ್ರಾಹಕರಿಗೆ ಖುಷಿ ಕೊಟ್ಟಿದೆ. ಕೊಬ್ಬರಿ ದರವೂ ಇಳಿಮುಖವಾಗಿದ್ದು, ಒಂದೇ ದಿನದಲ್ಲಿ ಕೆ.ಜಿ.ಗೆ 5ರಿಂದ 6 ರೂ.ವರೆಗೆ ಕಡಿಮೆಯಾಗಿದೆ.
ಕೇರಳದಲ್ಲೂ ಬೆಲೆ ಕುಸಿತ: ವರ್ಷಗಳಿಂದ ಬೆಲೆ ಕುಸಿತ, ರೋಗಬಾಧೆ, ಉತ್ಪಾದನೆ ಕುಸಿತ ಮೊದಲಾದ ಕಾರಣಗಳಿಂದ ನಷ್ಟ ಅನುಭವಿಸುತ್ತಿದ್ದ ತೆಂಗು ಕೃಷಿಕರಿಗೆ ಕಳೆದ ಸೆಪ್ಟೆಂಬರ್‌ನಲ್ಲಿ ಕೇರಳ ಸರಕಾರ ತೆಂಗಿನಕಾಯಿ ಕೆ.ಜಿ.ಗೆ 34 ರೂ. ನಿಗದಿಪಡಿಸಿತ್ತು. ಆದರೆ ಈ ದರ ದಾಟಿ ಸಾರ್ವಜನಿಕ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿತ್ತು. 2024ರ ಅ.15ರ ಬಳಿಕ ತೆಂಗಿನಕಾಯಿ ಕೆ.ಜಿ.ಗೆ 50ರೂ.ಗೆ ತಲುಪಿತ್ತು. ತೆಂಗಿನಕಾಯಿ ದರದಲ್ಲಿ ಮತ್ತೆ ಹೆಚ್ಚಳವಾಗಿದ್ದು, ಕೆ.ಜಿ.ಗೆ 100 ರೂ. ದಾಟಲಿದೆ ಎಂಬ ಸ್ಥಿತಿಗೆ ತಲುಪಿದಾಗ ತೆಂಗಿನಕಾಯಿ ದರದಲ್ಲಿ ಹಠಾತ್ ಇಳಿಕೆಯುಂಟಾಗಿದೆ.
ತೆಂಗಿನೆಣ್ಣೆ ದರ ಹೆಚ್ಚಳದಿಂದಾಗಿ ಕೇರಳ ಮತ್ತು ಕರಾವಳಿ ಪ್ರದೇಶದಲ್ಲಿ ಜನರು ಪಾಮ್ ಆಯಿಲ್ ಉಪಯೋಗಿಸಲು ಆರಂಭಿಸಿರುವುದು ಮತ್ತು ತಮಿಳುನಾಡಿನ ಹೊಸ ತೆಂಗು ಬೆಳೆ ಆರಂಭ ಬೆಲೆ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ತೆಂಗಿನಕಾಯಿ ಬೆಲೆ ಇನ್ನೂ ಇಳಿಕೆಯಾಗುತ್ತದೆ ಎಂದು ವ್ಯಾಪಾರಿಗಳು ತಿಳಿಸಿರುತ್ತಾರೆ.