ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರತ್ಯೇಕ ಇಲಾಖೆಯಾಗಿ ಅಕ್ಟೋಬರ್ 2ಕ್ಕೆ 50 ವರ್ಷ ಪೂರ್ಣವಾಗುತ್ತಿದೆ. ಇದರ ಅಂಗವಾಗಿ ರಾಜ್ಯದ ನಾಲ್ಕು ಸಾವಿರಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ನಿರ್ಧರಿಸಲಾಗಿದೆ.
ಆಧುನಿಕತೆಗೆ ಅನುಗುಣವಾಗಿ ಮಕ್ಕಳ ಕಲಿಕೆಗೆ ಸ್ಮಾರ್ಟ್ ಟಿವಿ, ಕಲಿಕಾ ಪರಿಕರಗಳ ಖರೀದಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ಕೂಡ ನೀಡಲಾಗುತ್ತಿದೆ. ರಾಜ್ಯದಲ್ಲಿ 69 ಸಾವಿರ ಅಂಗನವಾಡಿ ಕೇಂದ್ರಗಳಿವೆ. ಪ್ರತಿ ಕೇಂದ್ರಗಳಲ್ಲಿಯೂ ತಲಾ ಒಬ್ಬರು ಕಾರ್ಯಕರ್ತೆಯರು, ಸಹಾಯಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ.
ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿದರೂ, ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದಿಲ್ಲ. ಸದ್ಯ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆಯರಲ್ಲಿ 17 ಸಾವಿರಕ್ಕೂ ಅಧಿಕ ಮಂದಿ ಪದವಿ ಪೂರ್ಣಗೊಳಿಸಿದವರಿದ್ದು, ಅವರ ಮೂಲಕವೇ ಮಕ್ಕಳಿಗೆ ಶಿಕ್ಷಣ ನೀಡಲಾಗುವುದು.
ರಾಜ್ಯದಲ್ಲಿ 10,000 ಅಂಗನವಾಡಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ಸದ್ಯ 4 ರಿಂದ 5000 ಅಂಗನವಾಡಿಗಳಲ್ಲಿ ಎಲ್.ಕೆ.ಜಿ., ಯುಕೆಜಿ ಆರಂಭಿಸಲಾಗುವುದು. ಮುಂದಿನ ದಿನದಗಳಲ್ಲಿ ಹಂತ ಹಂತವಾಗಿ ಎಲ್ಲಾ ಕೇಂದ್ರಗಳಿಗೆ ವಿಸ್ತರಿಸಲಾಗುವುದು. ಕೇಂದ್ರ ಪಠ್ಯಕ್ರಮವನ್ನು ಮಕ್ಕಳಿಗೆ ಕಲಿಸಲಿದ್ದು, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.