ಬೆಂಗಳೂರು : ಹಾಲಿನ ದರ, ವಿದ್ಯುತ್ ದರ, ಕುಡಿಯುವ ನಿರಿನ ದರ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆ ವಿರುದ್ಧ ಜನ ಆಕ್ರೋಶ ಹೊರಹಾಕುತ್ತಿದ್ದಾರೆ.
ಈ ಮಧ್ಯೆ ಡೀಸೆಲ್ ದರ ಏರಿಕೆ ವಿರುದ್ಧ ಲಾರಿ ಮಾಲೀಕರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಡೀಸೆಲ್ ದರ ಏರಿಕೆ ಲಾರಿ ಮಾಲೀಕರ ಮೇಲೆ ನೇರವಾಗಿ ಪರಿಣಾಮ ಬೀರಲಿದ್ದು, ಅವರು ಮುಷ್ಕರ ನಡೆಸಲು ಮುಂದಾಗಿದ್ದಾರೆ.
ಮುಷ್ಕರದ ರೂಪುರೇಷೆ ನಿರ್ಧರಿಸಲು ನಾಳೆ ಲಾರಿ ಮಾಲೀಕರ ಸಂಘ ಸಭೆ ನಡೆಸಲಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಎರಡು ಬಾರಿ ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದೆ. ಹಾಗಾಗಿ ನಾಳೆ ಈ ಕುರಿತು ಸಭೆ ನಡೆಸುತ್ತೇವೆ. ದರ ಏರಿಕೆ ಖಂಡಿಸಿ ಮುಂದಿನ ವಾರ ಮುಷ್ಕರಕ್ಕೆ ಕರೆ ನೀಡಲಿದ್ದೇವೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿಆರ್ ಷಣ್ಮುಗಪ್ಪ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡ 2.73 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಬಿದ್ದಿತ್ತು.
ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಡಿಸೆಲ್ ಬೆಲೆ 2 ರೂಪಾಯಿಯಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ಲಾರಿ ಬಾಡಿಗೆ ದರವನ್ನೂ ಹೆಚ್ಚಳ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದು, ಇದು ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಡೀಸೆಲ್ ದರ ಇಳಿಸುವಂತೆ ಒತ್ತಾಯಿಸಲು ಲಾರಿ ಮಾಲೀಕರ ಸಂಘ ಮುಷ್ಕರ ಮಾಡಲು ನಿರ್ಧರಿಸಿದೆ.