ಬೆಂಗಳೂರು : ಡೀಸೆಲ್ ದರ ಏರಿಕೆ ಖಂಡಿಸಿ ಇಂದು ಮಧ್ಯರಾತ್ರಿಯಿಂದಲೇ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಕರೆ ನೀಡಿದೆ.
ಸುಮಾರು 6 ಲಕ್ಷಕ್ಕೂ ಹೆಚ್ಚು ಲಾರಿಗಳು ಇಂದು ಮಧ್ಯರಾತ್ರಿಯಿಂದಲೇ ಸೇವೆ ಬಂದ್ ಮಾಡಲಿದೆ, ಹೀಗಾಗಿ ರಾಜ್ಯಕ್ಕೆ ಬರುವ ಮತ್ತು ಹೊರರಾಜ್ಯಗಳಿಗೆ ತೆರಳುವ ಸರಕು ಸಾಗಣೆಯಲ್ಲಿ ನಾಳೆಯಿಂದ ವ್ಯತ್ಯಯ ಉಂಟಾಗಲಿದೆ.
6 ತಿಂಗಳಲ್ಲಿ ಸರ್ಕಾರ 2 ಬಾರಿ ಡಿಸೇಲ್ ದರ ಹೆಚ್ಚಿಸಿದೆ. ಡೀಸೆಲ್ ದರ ಇಳಿಸಬೇಕು ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಲಾರಿ ಮಾಲೀಕರು ಇಂದಿನ ವರೆಗೆ ಗಡುವು ಕೊಟ್ಟಿದ್ರು. ಆದರೆ, ಸರ್ಕಾರ ಇದಕ್ಕೆ ಸ್ಪಂದಿಸದೇ ಇರುವುದರಿಂದ ಇಂದು ಮಧ್ಯರಾತ್ರಿಯಿಂದಲೆ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಮುಂದಾಗಿದೆ.
ಹೌದು. ಪ್ರಸ್ತುತ ಡಿಸೇಲ್ ದರ ಹೆಚ್ಚಳ, ರಾಜ್ಯ ಹೆದ್ದಾರಿಗಳಿಗೆ ಟೋಲ್ ಅಳವಡಿಕೆ ಹಣ ವಸೂಲಿ, ಆರ್‌ಟಿಓ ಬಾರ್ಡರ್ ಚೆಕ್ ಪೋಸ್ಟ್, ಎಫ್‌ಸಿ ಶುಲ್ಕ ಹೆಚ್ಚಿಸಿರುವುದು, ಬೆಂಗಳೂರು ನಗರದಲ್ಲಿ ಸರಕು ಸಾಗಾಣಿಕೆ ವಾಹನಗಳಿಗೆ ನೋ ಎಂಟ್ರಿ, ಚಾಲಕರ ಮೇಲೆ ಹಲ್ಲೆ ಹೀಗೆ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಡೀಸೆಲ್ ದರವನ್ನು 2024ರ ಜೂನ್‌ನಲ್ಲಿ 3 ರೂ. ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಈಗ ಮತ್ತೆ 2 ರೂ. ಹೆಚ್ಚಳ ಮಾಡಿದೆ. ಈ ಏರಿಕೆ ಕೈಬಿಡುವವರೆಗೆ ಮುಷ್ಕರ ಕೈಬಿಡುವುದಿಲ್ಲ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ತಿಳಿಸಿದ್ದಾರೆ.