ಚಿತ್ರದುರ್ಗ: ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲ್ಯಗಳ ಸಾಮರ್ಥ್ಯ ಬೆಳೆಸಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು. ನಗರದ ಡಯಟ್‌ನಲ್ಲಿ ಡಿ.ಎಸ್.ಇ.ಆರ್.ಟಿ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಸಹಯೋಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲಭಾಷಾ ಮಾಧ್ಯಮದಲ್ಲಿ ಬೋಧಿಸುವ ಶಿಕ್ಷಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಇಂಗ್ಲೀಷ್ ಭಾಷಾ ಕಲಿಕೆಯು ಅಗತ್ಯವಾಗಿದೆ. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಭಾಷಾ ಕೌಶಲ್ಯಗಳಾದ ಆಲಿಸುವಿಕೆ, ಮಾತು, ಓದು ಮತ್ತು ಬರಹದಲ್ಲಿ ಸಾಮರ್ಥ್ಯ ಬೆಳೆಸಬೇಕು. ಇದರಿಂದ ವಿದ್ಯಾರ್ಥಿಗಳು ಭವಿಷ್ಯದ ಉನ್ನತ ಶಿಕ್ಷಣ ಪಡೆಯಲು ಸುಲಭವಾಗುತ್ತದೆ ಎಂದು ತಿಳಿಸಿದರು. ತರಬೇತಿಯಲ್ಲಿ ಪಡೆದ ಜ್ಞಾನವನ್ನು ತರಗತಿ ಕೋಣೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನ ಮಾಡುವುದರ ಮೂಲಕ ಮಕ್ಕಳಿಗೆ ಬುನಾದಿ ಸಾಕ್ಷರತೆ ಸಾಮರ್ಥ್ಯ ಬೆಳೆಸಬೇಕು ಎಂದರು.
ಉಪ ಪ್ರಾಚಾರ್ಯ ಅಶ್ವಥ್ ನಾರಾಯಣ, ನೋಡಲ್ ಅಧಿಕಾರಿ ಅರ್ಜುಮಂದ್ ಬಾನು, ತರಬೇತಿ ನಿರ್ದೇಶಕ ಎಲ್.ರೇವಣ್ಣ, ಹಿರಿಯ ಉಪನ್ಯಾಸಕರಾದ ಎಸ್.ಸಿ.ಪ್ರಸಾದ್, ಎಸ್.ಜ್ಞಾನೇಶ್ವರ, ಉಪನ್ಯಾಸಕ ಎಸ್.ಬಸವರಾಜು, ಸಂಪನ್ಮೂಲ ವ್ಯಕ್ತಿಗಳಾದ ಜಿ.ಜಿ.ನಾಗರಾಜು, ಸುಂದರ್ ರಾಜು, ಮಂಜುನಾಥ್, ರಂಜಿತಾ, ಸ್ಮಿತಾ, ಪ್ರಕಾಶ್, ರಾಧಾ ಮತ್ತು ಶಿಕ್ಷಕರು ಇದ್ದರು.