ಲಖನೌ: ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ಇಂದು ಬುಧವಾರ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕುಂಭ ಮೇಳಕ್ಕೆ ಆಗಮಿಸಿದ್ದಾರೆ. ಅವರು ಪ್ರಯಾಗ್ರಜ್ಗೆ ಆಗಮಿಸಿದ ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿಯನ್ನು ಸ್ವಾಗತಿಸಿದರು. ಅಲ್ಲಿಂದ ಮುಂದೆ ಅವರು ಏರಿಯಲ್ ಘಾಟ್ನಲ್ಲಿ ದೋಣಿಯ ಮೂಲಕ ತ್ರಿವೇಣಿ ಸಂಗಮಕ್ಕೆ ತೆರಳಿ ಅಮೃತ ಸ್ನಾನವನ್ನು ಕೈಗೊಂಡಿದ್ದಾರೆ.
ಪುಣ್ಯ ಸ್ನಾನದ ಸಂದರ್ಭದಲ್ಲಿ ಕೈಯಲ್ಲಿ ರುದ್ರಕ್ಷಿ ಮಾಲೆಯನ್ನು ಹಿಡಿದು, ಮಂತ್ರ ಉಚ್ಛಾರಣೆ ಮಾಡುತ್ತಾ ತ್ರಿವೇಣಿಯಲ್ಲಿ ಮೋದಿ ಪುಣ್ಯ ಸ್ನಾನ ಮಾಡಿದ್ದಾರೆ. ಮೂರು ಬಾರಿ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದರು. ಅಮೃತ ಸ್ನಾನದ ಬಳಿಕ ಪ್ರಧಾನಿ ಅಲ್ಲಿಯೇ ಧ್ಯಾನ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ನಂತರ ಮಧ್ಯಾಹ್ನ 12.30 ಕ್ಕೆ ವಾಯುಪಡೆಯ ವಿಮಾನದ ಮೂಲಕ ಪ್ರಯಾಗ್ರಾಜ್ನಿಂದ ಹಿಂತಿರುಗಲಿದ್ದಾರೆ. ಜನವರಿ 13 ರಿಂದ ಪ್ರಾರಂಭವಾದ ಫೆ. 26 ರ ವರೆಗೆ ಮಹಾಕುಂಭ ಮೇಳ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಕಿರಣ್ ರಿಜಿಜು, ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಜನರು ಪುಣ್ಯ ಸ್ನಾನ ಮಾಡಿದ್ದಾರೆ.
ಉತ್ತರ ಪ್ರದೇಶದ ಸರ್ಕಾರದ ಪ್ರಕಾರ ಸುಮಾರು 45 ಕೋಟಿ ಜನರು ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೌನಿ ಅಮವಾಸ್ಯೆಯಂದು ಕಾಲ್ತುಳಿತ ಉಂಟಾಗಿ 30 ಜನ ಮೃತಪಟ್ಟಿದ್ದರೆ, ಹಲವು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಮೃತಪಟ್ಟ ಕುಟುಂಬಗಳಿಗೆ 25 ಲಕ್ಷ ರೂ ಪರಿಹಾರವನ್ನು ಉತ್ತರ ಪ್ರದೇಶ ಸರ್ಕಾರ ಘೋಷಣೆ ಮಾಡಿದೆ.