ಚಿತ್ರದುರ್ಗ : ಗೊಲ್ಲ ಸಮಾಜದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕಳೆದ 40 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದೇನೆ. ನನ್ನ ಏಳಿಗೆಯನ್ನು ಸಹಿಸದ ಮಾಜಿ ಶಾಸಕ ಎ.ವಿ.ಉಮಾಪತಿ, ಸಿ.ಟಿ.ಕೃಷ್ಣಮೂರ್ತಿ, ಅಜ್ಜಪ್ಪ ಇವರುಗಳು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಅಪ ಪ್ರಚಾರದಲ್ಲಿ ತೊಡಗಿದ್ದಾರೆಂದು ಜಿಲ್ಲಾ ಯಾದವ ಗೊಲ್ಲರ ಸಂಘದ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ವಿರೋಧಿಗಳಿಗೆ ತಿರುಗೇಟು ನೀಡಿದರು.
ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ಹೋರಾಟ ನಡೆಸಿದ ಫಲವಾಗಿ ವಿದ್ಯಾರ್ಥಿ ನಿಲಯ ಸಿಕ್ಕಿದೆ. ಗೊಲ್ಲ ಜನಾಂಗವನ್ನು ಎಸ್ಟಿ.ಗೆ ಸೇರಿಸಲು ಹೋರಾಟ ನಡೆಸಿ ಜೈಲು ವಾಸ ಕೂಡ ಅನುಭವಿಸಿದ್ದೇನೆ. ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣ ಸಮುದಾಯ ಭವನ ನಿರ್ಮಾಣಕ್ಕಾಗಿ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಅನುದಾನ ಮಂಜೂರು ಮಾಡಿಸಿದ್ದೇನೆ. ಸಂಘದ ಕಟ್ಟಡದ ಬಾಡಿಗೆ ಹಣದಲ್ಲಿ ವಿದ್ಯಾನಗರದಲ್ಲಿ 52 ಲಕ್ಷದ 90 ಸಾವಿರದ 333 ರೂ.ಗಳ ಚಲನ್ ಕಟ್ಟಿ ಸಿಎ. ನಿವೇಶನ ಖರೀಧಿಸಿದ್ದೇವೆ. ಇದನ್ನು ದುರಪಯೋಗವೆನ್ನುವುದಾದರೆ ಯಾವ ನ್ಯಾಯ ಎಂದು ಪ್ರಶ್ನಿಸಿದರು?
ವಿನಾ ಕಾರಣ ನನ್ನ ಮೇಲೆ ಆಪಾದನೆ ಹೊರಿಸುತ್ತಿರುವುದರಿಂದ ಸಂಘದ ಅಭಿವೃದ್ದಿಗೆ ಹಿನ್ನೆಡೆಯಾಗುತ್ತಿದೆ. ಇದರಿಂದ ಇನ್ನು ಮುಂದೆ ನಮ್ಮ ಸಂಘಕ್ಕೆ ಯಾವ ಜನಪ್ರತಿನಿಧಿಯೂ ಅನುದಾನ ನೀಡಲು ಅನುಮಾನ ಪಡುವಂತಾಗುತ್ತದೆ. ಸಿ.ಮಹಲಿಂಗಪ್ಪನವರನ್ನು ಓಡಿಸಿ ಗೊಲ್ಲರ ಸಂಘವನ್ನು ಉಳಿಸಿ ಎಂದು ಕರಪತ್ರಗಳನ್ನು ಮುದ್ರಿಸಿ ಹಂಚಿಕೆ ಮಾಡಿರುವುದು ನನ್ನ ಮಾನಹಾನಿಯಾಗಿದೆ. ಸಂಘದಲ್ಲಿ ಕೋಟಿಗಟ್ಟಲೆ ಹಣ ದುರುಪಯೋಗವಾಗಿದೆ ಎಂದು ಸಮಾಜದ ಬಂಧುಗಳಲ್ಲಿ ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಿದ್ದಾರೆ. ನಾನು ತಪ್ಪು ಮಾಡಿದ್ದರೆ ತನಿಖೆ ಮಾಡಿಸಲಿ. ಅವರ ವಿರುದ್ದ ನಾನೂ ಕೂಡ ಇಡಿಯಲ್ಲಿ ಪ್ರಶ್ನಿಸುತ್ತೇನೆಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಯಾದವ ಗೊಲ್ಲರ ಸಂಘದ ಅಧ್ಯಕ್ಷನಾದಾಗಿನಿಂದಲೂ ಇದುವರೆವಿಗೂ ಸಂಘದಲ್ಲಿ ನಡೆದ ಎಲ್ಲಾ ಹಣಕಾಸಿನ ವಹಿವಾಟುಗಳು ಆದಾಯ ಮತ್ತು ಖರ್ಚುಗಳನ್ನು ಪಾರದರ್ಶಕವಾಗಿ ಆಡಿಟ್ ಮಾಡಿಸಿ ದಾಖಲೆಗಳನ್ನು ಇಟ್ಟಿದ್ದೇನೆ. ವಿರೋಧಿಗಳು ಆಪಾದಿಸಿರುವಂತೆ ನಾನು ಸಂಘದ ಹಣ ದುರುಪಯೋಗಪಡಿಸಿಕೊಂಡಿರುವುದು ಸಾಬಿತಾದಲ್ಲಿ ಎರಡು ಪಟ್ಟು ಹಣವನ್ನು ಪಾವತಿಸಿ ಸಮಾಜದ ಬಂಧುಗಳಲ್ಲಿ ಬಹಿರಂಗವಾಗಿ ಕ್ಷಮೆ ಕೇಳುತ್ತೇನೆಂದು ಸವಾಲು ಹಾಕಿದರು.
ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ.ಯಿಂದ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷರಾದ ಬೆಂಗಳೂರಿನ ರಾಜಣ್ಣನವರನ್ನು ನಾನೆ ಕರೆತಂದಿದ್ದೇನೆಂದು ಊಹಿಸಿ ಇದರಿಂದ ನಮ್ಮ ಅಸ್ತಿತ್ವ ಕಡಿಮೆಯಾಗುತ್ತದೆಂದು ಸಮಾಜದ ಬಂಧುಗಳಲ್ಲಿ ನನ್ನ ಮೇಲೆ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆಂದು ಮೀಸೆ ಮಹಾಲಿಂಗಪ್ಪ ತಿಳಿಸಿದರು.
ಜಿಲ್ಲಾ ಯಾದವ ಗೊಲ್ಲರ ಸಂಘದ ಪ್ರಧಾನ ಕಾರ್ಯದರ್ಶಿ ಆನಂದಪ್ಪ, ಉಪಾಧ್ಯಕ್ಷ ಕಿರಣ್ಕುಮಾರ್, ವೆಂಕಟೇಶ್ಯಾದವ್, ಡಿ.ಜಿ.ಗೋವಿಂದಪ್ಪ, ರಂಗಸ್ವಾಮಿ, ಪ್ರಕಾಶ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.