ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲಿನಲ್ಲಿ ರಮ್ಮಿ ಆಡುತ್ತಿದ್ದ ಮಾಣಿಕ್ರಾವ್ ಕೊಕಾಟೆ ಕೃಷಿ ಖಾತೆಯನ್ನು ಕಳೆದುಕೊಂಡಿದ್ದಾರೆ. ಕಳಂಕಿತ ಸಚಿವನ ವಿರುದ್ಧ ಎನ್ ಸಿಪಿ ಮುಖ್ಯಸ್ಥ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕೊನೆಗೂ ಕ್ರಮ ಕೈಗೊಂಡು ಕೃಷಿ ಸಚಿವರಿಗೆ ಹಿಂಬಡ್ತಿ ನೀಡಿದ್ದಾರೆ.
ಕೊಕಾಟೆ ನಿರ್ವಹಿಸುತ್ತಿದ್ದ ಕೃಷಿ ಖಾತೆಯನ್ನು ಎನ್ಸಿಪಿ ಸಚಿವ ದತ್ತಾತ್ರೇಯ ಭರ್ನೆ ಅವರಿಗೆ ವಹಿಸಲಾಗಿದೆ. ಭರ್ನೆಯವರ ಕ್ರೀಡೆ, ಯುವಜನ ಕಲ್ಯಾಣ, ಅಲ್ಪಸಂಖ್ಯಾತರ ಅಭಿವೃದ್ಧಿ ಹಾಗೂ ವಕ್ಫ್ ಖಾತೆ ಕೊಕಾಟೆಗೆ ಲಭ್ಯವಾಗಿದೆ.
ಘಟನೆ ಬಗ್ಗೆ ಕೊಕಾಟೆ ಕ್ಷಮೆ ಯಾಚಿಸಿದ ಹಿನ್ನೆಲೆಯಲ್ಲಿ ಮತ್ತು ಮುಂದೆ ಇಂಥ ಘಟನೆಗಳು ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಮುಂದುವರಿಯಲು ಪವಾರ್ ಸಮ್ಮತಿ ಸೂಚಿಸಿದರು ಎಂದು ಪಕ್ಷದ ಮೂಲಗಳು ಹೇಳಿವೆ.
ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಕೊಕಾಟೆಗೆ ಹಲವು ಬಾರಿ ಪವಾರ್ ಎಚ್ಚರಿಕೆಯನ್ನೂ ನೀಡಿದ್ದರು. ಕೊಕಾಟೆಯವರ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆಗುವ ಹಾನಿಯಿಂದ ರಕ್ಷಿಸಲು ಕೊಕಾಟೆ ವಿರುದ್ಧ ಕ್ರಮಕ್ಕೆ ಸಿಎಂ ದೇವೇಂದ್ರ ಫಡ್ನವೀಸ್ ಆಗ್ರಹಿಸಿದ್ದರು ಎಂದು ಸರ್ಕಾರಿ ಮೂಲಗಳು ಹೇಳಿವೆ.
ಮಹಾರಾಷ್ಟ್ರದಲ್ಲಿನ ಕೃಷಿ ಬಿಕ್ಕಟ್ಟಿನ ನಡುವೆ ಕೊಕಾಟೆ ಅವರ ಅಸಂವೇದನಾಶೀಲತೆಯನ್ನು ವಿರೋಧ ಪಕ್ಷದ ನಾಯಕರು ತೀವ್ರವಾಗಿ ಟೀಕಿಸಿದರು . ರಾಜ್ಯದ ರೈತರು ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ಕೃಷಿ ಸಚಿವರ ಈ ವರ್ತನೆ ಬೇಜವಾಬ್ದಾರಿಯನ್ನು ಸಹಿಸಲಾಗದು ಎಂದು ಹೇಳಿದ್ದಾರೆ.
ಆದರೆ ಮಾಣಿಕ್ರಾವ್ ಈ ಆರೋಪಗಳನ್ನು ನಿರಾಕರಿಸಿದ್ದರು. ಶಾಸಕಾಂಗ ತನಿಖೆಯಲ್ಲಿ ಅವರು ಸುಮಾರು 18 ರಿಂದ 22 ನಿಮಿಷಗಳ ಕಾಲ ಮೊಬೈಲ್ ಆಟಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ, ಆದರೆ ಅವರು ಕೇವಲ 10-15 ಸೆಕೆಂಡುಗಳು ಎಂದು ಹೇಳಿದ್ದರು.