ಮುಂಬೈ: ಪೋಷಕರ ಲೈಂಗಿಕತೆ ಕುರಿತು ಕ್ಷೇಪಾರ್ಹ ಹೇಳಿಕೆ ನೀಡಿದ ರಣವೀರ್ ಅಲ್ಲಾಹಬಾದಿಯಾ ವಿವಾದದ ಬಗ್ಗೆ ಮಹಾರಾಷ್ಟ್ರ ಸರ್ಕಾರ ಶುಕ್ರವಾರ ತನಿಖೆಗೆ ಆದೇಶಿಸಿದ್ದು, ನಿರ್ದಿಷ್ಟವಾಗಿ ಸಾಂಸ್ಕೃತಿಕ ಇಲಾಖೆಯ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ಸೂಚಿಸಿದೆ.ಸಚಿವ ಆಶಿಶ್ ಶೆಲಾರ್ ನೇತೃತ್ವದ ಸಾಂಸ್ಕೃತಿಕ ಇಲಾಖೆಯು ರಣವೀರ್ ಅಲ್ಲಾಹಬಾದಿಯಾ ವಿವಾದದ ಕುರಿತು ತನಿಖೆಗೆ ಆದೇಶಿಸಿದೆ.
ಅಲ್ಲಾಹಬಾದಿಯಾ ಅವರ “ಇಂಡಿಯಾಸ್ ಗಾಟ್ ಲ್ಯಾಟೆಂಟ್” ಮತ್ತು ಸೂಕ್ತ ಅನುಮತಿಯಿಲ್ಲದೆ ನಡೆಯುತ್ತಿರುವ ಇತರ ರೀತಿಯ ಕಾರ್ಯಕ್ರಮಗಳಲ್ಲಿ ಅಶ್ಲೀಲತೆಯ ಬಗ್ಗೆ ದೂರುಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸಚಿವರ ಕಚೇರಿಯ ಪ್ರಕಾರ, ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಅಶ್ಲೀಲತೆಯ ಬಗ್ಗೆ ಇಲಾಖೆಗೆ ದೂರುಗಳು ಬಂದಿವೆ ಮತ್ತು ಅಂತಹ ಇತರ ಕಾರ್ಯಕ್ರಮಗಳನ್ನು ಸೂಕ್ತ ಅನುಮತಿಯಿಲ್ಲದೆ ಪ್ರೇಕ್ಷಕರಿಗೆ ಟಿಕೆಟ್‌ಗಳೊಂದಿಗೆ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಸಚಿವ ಆಶಿಶ್ ಶೆಲಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವರವಾದ ತನಿಖೆಗೆ ಆದೇಶಿಸಿದ್ದಾರೆ. ಜನಪ್ರಿಯ ಭಾರತೀಯ ಯೂಟ್ಯೂಬರ್ ಮತ್ತು ಪಾಡ್‌ಕ್ಯಾಸ್ಟರ್ ರಣವೀರ್ ಅಲ್ಲಾಹಬಾದಿಯಾ ಅವರು “ಇಂಡಿಯಾಸ್ ಗಾಟ್ ಲ್ಯಾಟೆಂಟ್” ಕಾರ್ಯಕ್ರಮದಲ್ಲಿ ಪೋಷಕರ ಲೈಂಗಿಕತೆ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ನಂತರ ತೀವ್ರ ಟೀಕೆಗೆ ಗುರಿಯಾಗಿದ್ದು, ಅವರ ವಿರುದ್ದ ಹಲವು ಕಡೆ ಕೇಸ್ ದಾಖಲಿಸಲಾಗಿದೆ.
“ಇಂಡಿಯಾಸ್ ಗಾಟ್ ಲ್ಯಾಟೆಂಟ್” ಸುತ್ತಲಿನ ವಿವಾದ ಹೊಸದೇನಲ್ಲ. ಈ ಕಾರ್ಯಕ್ರಮವು ಈ ಹಿಂದೆ ತನ್ನ ಕರಾಳ ಹಾಸ್ಯಕ್ಕಾಗಿ ಟೀಕೆಗಳನ್ನು ಎದುರಿಸಿದೆ, ಇದನ್ನು ಅನೇಕರು ಅಸೂಕ್ಷ್ಮ ಮತ್ತು ಅಶ್ಲೀಲವೆಂದು ಪರಿಗಣಿಸುತ್ತಾರೆ.