ಚಿತ್ರದುರ್ಗ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿಗೆ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.
ಬ್ಯಾಕ್ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆಯಡಿ ಗರಿಷ್ಠ 1 ಲಕ್ಷದವರೆಗೆ ಕಿರು ಆರ್ಥಿಕ ಚಟುವಟಿಕೆ ಕೈಗೊಳ್ಳಲು ರೂ.50 ಸಾವಿರ ಸಹಾಯಧನ, ಹೈನುಗಾರಿಕೆ ನಡೆಸಲು ಘಟಕದ ವೆಚ್ಚದ ಶೇ.50 ರಷ್ಟು ಅಥವಾ ಗರಿಷ್ಠ ರೂ.1.25 ಲಕ್ಷ ಸಹಾಯಧನ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಉದ್ಯಮಗಳ ಘಟಕ ವೆಚ್ಚದ ಶೇ.70 ರಷ್ಟು ಅಥವಾ ಗರಿಷ್ಟ ರೂ.2 ಲಕ್ಷ ಸಹಾಯಧನ, ಸ್ವಾವಲಂಬಿ ಸಾರಥಿ ಯೋಜನೆಯಡಿ ಸರಕು ಹಾಗೂ ಹಳದಿ ಬೋರ್ಡ್ ಟ್ಯಾಕ್ಸಿ ಖರೀದಿಸಲು ಘಟಕದ ವೆಚ್ಚ ಶೇ.75 ರಷ್ಟು ಅಥವಾ ಗರಿಷ್ಠ ರೂ.4 ಲಕ್ಷ ಸಹಾಯಧನ ನೀಡಲಾಗುವುದು. ಈ ಎಲ್ಲಾ ಯೋಜನೆಗಳಿಗೂ ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ.
ಪ್ರೇರಣಾ ಮೈಕ್ರೋ ಕ್ರೆಡಿಟ್ ಯೋಜನೆಯಡಿ ಕನಿಷ್ಠ 10 ಜನರಿರುವ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಕಿರು ಆರ್ಥಿಕ ಚಟುವಟಿಕೆ ಕೈಗೊಳ್ಳಲು ರೂ.2.5 ಲಕ್ಷ ಸಹಾಯಧನ ಹಾಗೂ ರೂ.2.5 ಲಕ್ಷ ಬ್ಯಾಂಕ್ ಸಾಲ ನೀಡಲಾಗುವುದು. ಯೋಜನೆಯಡಿ ಘಟಕದ ಗರಿಷ್ಠ ವೆಚ್ಚ 5 ಲಕ್ಷವಾಗಿದೆ.
ಗಂಗಾಕಲ್ಯಾಣ ನೀರಾವರಿ ಯೋಜನೆಯಡಿ 5 ಎಕರೆ ಒಳಗೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೊಳವೆ ಬಾವಿ ಕೊರೆದು ಪಂಪಸೆಟ್ ಅಳವಡಿಸಿ, ವಿದ್ಯುದ್ದೀಕರಣಗೊಳಿಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಪ್ರತಿ ಘಟಕದ ವೆಚ್ಚ ರೂ.3.75 ಲಕ್ಷವಾಗಿದ್ದು, ಇದರಲ್ಲಿ ರೂ.50 ಸಾಲವನ್ನು ನಿಗಮದಿಂದ ನೀಡಲಾಗುತ್ತದೆ.
ಭೂ ಒಡೆತನ ಯೋಜನೆಯಡಿ ಮಹಿಳಾ ಕೃಷಿ ಕಾರ್ಮಿಕರಿಗೆ ಕೃಷಿ ಜಮೀನು ಖರೀದಿಸಲು ಘಟಕ ವೆಚ್ಚ ರೂ.20 ಲಕ್ಷದಲ್ಲಿ ಶೇ.50ರ ಅನುಪಾತದಲ್ಲಿ ಸಹಾಯಧನ ಹಾಗೂ ಸಾಲ ನೀಡಲಾಗುವುದು.
ಜಿಲ್ಲೆಯ ಪರಿಶಿಷ್ಟ ಪಂಗಡದ ಆಸಕ್ತರು ಯೋಜನೆಗಳಿಗೆ ಸೇವಾಸಿಂಧು ಪೋರ್ಟಲ್ http://sevasindhu.karnataka.gov.in ಮುಖಾಂತರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆ.17 ಕಡೆಯ ದಿನವಾಗಿದ್ದು, ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಸರಸ್ವತಿಪುರಂ ಮುಖ್ಯ ರಸ್ತೆಯಲ್ಲಿರುವ ನಿಗಮದ ಕಚೇರಿ ಅಥವಾ ದೂರವಾಣಿ ಸಂಖ್ಯೆ 08194-200430 ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.