ನವದೆಹಲಿ: ಡಬಲ್ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಮತ್ತು ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್ ಸೇರಿದಂತೆ ನಾಲ್ವರು ಅಥ್ಲೀಟ್ಗಳನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವಾಲಯ ಗುರುವಾರ ತಿಳಿಸಿದೆ.
ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಪಟ್ಟಿಯಲ್ಲಿ ಮನು ಅವರ ಹೆಸರು ಆರಂಭದಲ್ಲಿ ಕಾಣೆಯಾಗಿತ್ತು. ಇನ್ನು ಇವರ ಜತೆ ಭಾರತದ ಪುರುಷರ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಪಿಯನ್ ಪ್ರವೀಣ್ ಕುಮಾರ್ ಸೇರಿ ಎಲ್ಲರಿಗೂ ಜನವರಿ 17 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಿಶೇಷವಾಗಿ ಆಯೋಜಿಸಲಾದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಖೇಲ್ ರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮತ್ತು ಸೂಕ್ತ ಪರಿಶೀಲನೆಯ ಈ ನಾಲ್ವರು ಸಾಧಕರಿಗೆ ಪ್ರಶಸ್ತಿಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.