ತಿರುವನಂತಪುರಂ : ಭೂತಾನ್ ವಾಹನಗಳ ಅಕ್ರಮ ಕಳ್ಳಸಾಗಣೆ ಪ್ರಕರಣದಡಿ ಇಡಿ ಅಧಿಕಾರಿಗಳು ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟಿ , ದುಲ್ಕರ್ ಸಲ್ಮಾನ್ , ಪೃಥ್ವಿರಾಜ್ ಹಾಗೂ ಅಮಿತ್ ಚಕ್ಕಲಕಲ್ ಮನೆ ಮೇಲೆ ದಾಳಿ ಮಾಡಿದ್ದಾರೆ.
ಚೆನ್ನೈನಲ್ಲಿರುವ ಮಮ್ಮುಟ್ಟಿ ಅವರ ಚಲನಚಿತ್ರ ನಿರ್ಮಾಣ ಕಂಪನಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯ ನಡೆಸುತ್ತಿದ್ದಾರೆ. ಐಷಾರಾಮಿ ವಾಹನಗಳ ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಡಿ ಎರ್ನಾಕುಲಂ, ತ್ರಿಶೂರ್, ಕೋಝಿಕ್ಕೋಡ್, ಮಲಪ್ಪುರಂ, ಕೊಟ್ಟಾಯಂ ಮತ್ತು ಕೊಯಮತ್ತೂರಿನಲ್ಲಿರುವ ತಮಿಳು, ಮಲಯಾಳಂ ನಟರು ಹಾಗೂ ವಾಹನ ಮಾಲೀಕರು ಸೇರಿ 17 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಫೆಮಾ, 1999ರ ಅಡಿಯಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಇಂಡೋ-ಭೂತಾನ್/ನೇಪಾಳ ಮಾರ್ಗಗಳ ಮೂಲಕ ಲ್ಯಾಂಡ್ ಕ್ರೂಸರ್, ಡಿಫೆಂಡರ್ ಮತ್ತು ಮಸೆರಾಟಿಯಂತಹ ಐಷಾರಾಮಿ ಕಾರುಗಳ ಅಕ್ರಮ ಆಮದು ಮತ್ತು ನೋಂದಣಿಯಲ್ಲಿ ತೊಡಗಿರುವ ಸಿಂಡಿಕೇಟ್ ಅನ್ನು ಬಹಿರಂಗಪಡಿಸುವ ಮಾಹಿತಿಯ ಆಧಾರದ ಮೇಲೆ ದಾಳಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಕಲಿ ದಾಖಲೆಗಳನ್ನು ಬಳಸಿ ಅರುಣಾಚಲ ಪ್ರದೇಶ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳ ವಾಹನ ನೋಂದಣಿ ಪಡೆದುಕೊಂಡು ಅಕ್ರಮವಾಗಿ ಸಿನಿಮಾ ನಟರಿಗೆ, ಉದ್ಯಮಿಗಳಿಗೆ ಕಾರು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪ ಕೂಡ ಕೇಳಿಬಂದಿದೆ.