ತಿರುವನಂತಪುರ: ಕುವೈಟ್ಗೆ ಉದ್ಯೋಗಕ್ಕೆ ತೆರಳಿದ ಕೇರಳದವರು ಅಲ್ಲಿನ ಗಲ್ಫ್ ಬ್ಯಾಂಕ್ಗೆ 700 ಕೋ. ರೂ.ಅಧಿಕ ಮೊತ್ತ ವಂಚಿಸಿ ಪಲಾಯನ ಮಾಡಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಗಲ್ಫ್ ಬ್ಯಾಂಕ್ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಕೇರಳಕ್ಕೆ ಬಂದು ಈ ಕುರಿತು ದೂರು ನೀಡಿದ ಬಳಿಕ ಕೇರಳ ಪೊಲೀಸರು ವಂಚನೆ ಕುರಿತು ತನಿಖೆ ಪ್ರಾರಂಭಿಸಿದ್ದಾರೆ. ವಿಶೇಷವೆಂದರೆ ಸಾಲ ಪಡೆದು ವಂಚಿಸಿದವರಲ್ಲಿ ಬಹುತೇಕ ಮಂದಿ ನರ್ಸ್ ಕೆಲಸಕ್ಕಾಗಿ ಕುವೈಟ್ಗೆ ಹೋದ ಮಹಿಳೆಯರು.
ಗಲ್ಫ್ ಬ್ಯಾಂಕ್ನ ಕುವೈಟ್ ಷೇರ್ ಹೋಲ್ಡಿಂಗ್ ಕಂಪನಿಯಿಂದ ಅವರು ದೊಡ್ಡ ಮೊತ್ತದ ಸಾಲ ಪಡೆದುಕೊಂಡು ಪಲಾಯನ ಮಾಡಿದ್ದಾರೆ. ಸುಮಾರು 1500 ಮಂದಿ ಮಲಯಾಳಿಗಳ ವಿರುದ್ಧ ಅವರು ಸಾಲಕ್ಕಾಗಿ ನೀಡಿದ ದಾಖಲೆಪತ್ರಗಳಲ್ಲಿದ್ದ ವಿಳಾಸದ ಅಧಾರದಲ್ಲಿ ತನಿಖೆ ನಡೆಯುತ್ತಿದೆ.
ಆರಂಭದಲ್ಲಿ ವೇತನ ಪ್ರಮಾಣಪತ್ರ ತೋರಿಸಿ ಸಣ್ಣ ಮೊತ್ತದ ಸಾಲ ಪಡೆದುಕೊಂಡು ಸರಿಯಾಗಿ ತೀರಿಸುವುದು ಬಳಿಕ ಸ್ವಲ್ಪ ಹೆಚ್ಚು ಮೊತ್ತ ಪಡೆದುಕೊಂಡು ಅದನ್ನೂ ಕ್ಲಪ್ತ ಸಮಯಕ್ಕೆ ಪಾವತಿಸುವುದು, ಹೀಗೆ ಎರಡು-ಮೂರು ಸಲ ಮಾಡಿ ಬ್ಯಾಂಕಿನವರ ವಿಶ್ವಾಸ ಗಳಿಸಿ ದೊಡ್ಡ ಮೊತ್ತದ ಸಾಲಕ್ಕೆ ಬೇಡಿಕೆ ಇಡುವುದು. ಅದು ಮಂಜೂರು ಆದ ಕೂಡಲೇ ಮೊತ್ತವನ್ನು ವಿದ್ಡ್ರಾ ಮಾಡಿಕೊಂಡು ಪಲಾಯನ ಮಾಡುವುದು ಈ ವಂಚಕರ ಕಾರ್ಯಶೈಲಿ.
ಮೂರು ತಿಂಗಳ ಹಿಂದೆ ಈ ವಂಚನೆ ಬೆಳಕಿಗೆ ಬಂದು ಅಲ್ಲಿನ ಅಧಿಕಾರಿಗಳು ತನಿಖೆ ನಡೆಸಿದಾಗ ಸಾಲ ತೆಗೆದುಕೊಂಡವರೆಲ್ಲ ಕೆರಳದವರು ಎಂಬ ಅಂಶ ಬೆಳಕಿಗೆ ಬಂದಿದೆ. ಅದರಲ್ಲೂ ನರ್ಸ್ ಕೆಲಸಕ್ಕಾಗಿ ಹೋದವರೇ ಮನೆ ಮಾಡಲು, ವಾಹನ ಖರೀದಿ ಎಂದು ನಾನಾ ಕಾರಣಗಳನ್ನು ಕೊಟ್ಟ ಸಾಲ ತೆಗೆದಿದ್ದಾರೆ. ಇದರ ಹಿಂದೆ ವ್ಯವಸ್ಥಿತವಾದ ಜಾಲ ಇರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.