ಮಾಲೆ : ಜನವರಿ 1, 2007ರ ನಂತರ ಜನಿಸಿದ ಯಾರಿಗೂ ಯಾವುದೇ ತಂಬಾಕು ಉತ್ಪನ್ನವನ್ನು ಖರೀದಿಸಲು ಅಥವಾ ಬಳಸಲು ಅವಕಾಶವಿಲ್ಲ ಎಂದು ಮಾಲ್ಡೀವ್ಸ್ ಸರ್ಕಾರ ತಿಳಿಸಿದೆ. ಈ ಮೂಲಕ ಮಾಲ್ಡೀವ್ಸ್ ಧೂಮಪಾನ ನಿಷೇಧ ಮಾಡಿದ ವಿಶ್ವದ ಮೊದಲ ದೇಶವಾಗಿದೆ.
ನವೆಂಬರ್ 1, 2025ರ ಹೊಸ ಕಾನೂನಿನಡಿಯಲ್ಲಿ ಜನವರಿ 1, 2007ರ ನಂತರ ಜನಿಸಿದ ಯಾರಿಗೂ ಯಾವುದೇ ತಂಬಾಕು ಉತ್ಪನ್ನವನ್ನು ಖರೀದಿಸಲು ಅಥವಾ ಬಳಸಲು ಅವಕಾಶವಿಲ್ಲ, ಮತ್ತು ಈ ನಿಯಮವು ದ್ವೀಪಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೂ ಅನ್ವಯಿಸುತ್ತದೆ. ಈ ಕಾಯ್ದೆಗೆ ಮಾಲ್ಡೀವ್ಸ್ ಸಂಸತ್ತಿನಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಝು ಅನುಮೋದನೆ ನೀಡಿದ್ದು, ಇಂದಿನಿಂದ ಈ ಕಾನೂನು ಜಾರಿಗೆ ಬರಲಿದೆ.
ಸಾರ್ವಜನಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಭವಿಷ್ಯದ ಪೀಳಿಗೆಯನ್ನು ಧೂಮಪಾನದಿಂದ ರಕ್ಷಿಸಲು ಈ ಐತಿಹಾಸಿಕ ಮೈಲಿಗಲ್ಲುನ್ನು ಸಾಧಿಸಿದೆ. ಈ ಕಾನೂನು ಎಲ್ಲಾ ರೀತಿಯ ತಂಬಾಕನ್ನು ಒಳಗೊಳ್ಳುತ್ತದೆ. ಅಂಗಡಿ, ಮಾರುಕಟ್ಟೆಗಳಲ್ಲಿ ಈ ಯಾವುದೇ ಉತ್ಪನ್ನವನ್ನು ಮಾರಾಟ ಮಾಡುವ ಮೊದಲು ಗ್ರಾಹಕರ ವಯಸ್ಸನ್ನು ಪರಿಶೀಲಿಸಬೇಕು ಎಂದು ಸರ್ಕಾರ ಆದೇಶವನ್ನು ನೀಡಿದೆ. ಈ ನಿಷೇಧವು ಇ-ಸಿಗರೇಟ್‌ಗಳು ಮತ್ತು ವೇಪಿಂಗ್ ಸಾಧನಗಳನ್ನು ಸಹ ಒಳಗೊಂಡಿದೆ. ಈ ಉತ್ಪನ್ನಗಳನ್ನು ವಯಸ್ಸಿನ ಹೊರತಾಗಿಯೂ ಯಾರೂ ಆಮದು ಮಾಡಿಕೊಳ್ಳಲು, ಮಾರಾಟ ಮಾಡಲು, ಹಂಚಿಕೊಳ್ಳಲು, ಬಳಸಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಯುವಜನರನ್ನು ತಂಬಾಕು ಸಂಬಂಧಿತ ಕಾಯಿಲೆಯಿಂದ ದೂರವಿಡುವುದು ಸರ್ಕಾರ ಉದ್ದೇಶವಾಗಿದೆ. ತಂಬಾಕು ನಿಯಂತ್ರಣದ ಕುರಿತಾದ WHO ಫ್ರೇಮ್‌ವರ್ಕ್ ಸಮಾವೇಶದ ಅಡಿಯಲ್ಲಿ ಇದನ್ನು ತರಲಾಗಿದೆ ಎಂದು ಸಚಿವಾಲಯ ಹೇಳಿದೆ. ಒಂದು ವೇಳೆ ಕಾನೂನನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಸರ್ಕಾರ ತಂದಿರುವ ಕಾನೂನುಗಳನ್ನು ಉಲ್ಲಂಘಿಸಿದರೆ ತಂಬಾಕು ಮಾರಾಟ ಮಾಡುವ ಅಂಗಡಿಗಳಿಗೆ 50,000 ಮಾಲ್ಡೀವಿಯನ್ ರುಫಿಯಾ ದಂಡ ವಿಧಿಸಬಹುದು. ಇ-ಸಿಗರೇಟ್ ಅಥವಾ ವೇಪಿಂಗ್ ಸಾಧನಗಳನ್ನು ಬಳಸುವುದರಿಂದ ಸಿಕ್ಕಿಬಿದ್ದ ಜನರು 5,000 ರುಫಿಯಾ ದಂಡ ವಿಧಿಸಲಾಗುತ್ತದೆ ಎಂದು ಅಧ್ಯಕ್ಷ ಮೊಹಮ್ಮದ್ ಮುಯಿಝು ಮಾಹಿತಿ ನೀಡಿದ್ದಾರೆ.
ನಮ್ಮ ದೇಶದ ಜನರ ಆರೋಗ್ಯವನ್ನು ಸುಧಾರಿಸಲು ಈ ಕ್ರಮವನ್ನು ತರಲಾಗಿದೆ. ತಂಬಾಕು ಸೇವನೆಯು ವಿಶ್ವಕ್ಕೆ ದೊಡ್ಡ ಸವಾಲಾಗಿದೆ. ಇದರಿಂದ ಪ್ರತಿ ವರ್ಷ 7 ಮಿಲಿಯನ್‌ಗಿಂತಲೂ ಹೆಚ್ಚು ಸಾವುಗಳು ಸಂಭವಿಸಿದೆ. ಮಾಲ್ಡೀವ್ಸ್‌ನ ಹೊಸ ನೀತಿಯು ತಂಬಾಕು ಮುಕ್ತ ಉತ್ಪಾದನೆ ಮಾದರಿಯನ್ನು ಅನುಸರಿಸುತ್ತದೆ ಎಂದು ತಿಳಿಸಿದ್ದಾರೆ.

































